ಗಯಾ(ಬಿಹಾರ): ಶವಸಂಸ್ಕಾರ ಮಾಡಲು ಹಣವಿಲ್ಲದೇ ಬಡ ಕುಟುಂಬವೊಂದು ಪರದಾಡಿದ ಹೃದಯವಿದ್ರಾವಕ ಘಟನೆ ಗಯಾ ಜಿಲ್ಲೆಯ ಬಾರಾಚಟ್ಟಿ ಬ್ಲಾಕ್ನಲ್ಲಿ ನಡೆದಿದೆ. ಇಲ್ಲಿನ ಕಹುಡಗ ಗ್ರಾಮದ ನಿವಾಸಿ ಅನಿತಾ ದೇವಿ (45) ಕಳೆದ ರಾತ್ರಿ ಮೃತಪಟ್ಟಿದ್ದರು. ಮೃತರ ಕುಟುಂಬದವರು ಕಡು ಬಡವರಾಗಿದ್ದರಿಂದ ಶವಸಂಸ್ಕಾರ ನಡೆಸಲು ಕಟ್ಟಿಗೆಗೂ ಹಣವಿಲ್ಲದ ಅಸಹಾಯಕ ಸ್ಥಿತಿಯಲ್ಲಿದ್ದರು. ಹೀಗಾಗಿ ಮೃತದೇಹವನ್ನು ಮನೆ ಬಾಗಿಲಲ್ಲೇ ಸುಮಾರು ಹೊತ್ತು ಇರಿಸಲಾಗಿತ್ತು. ನಂತರ ತಮ್ಮ ಸಂಬಂಧಿಕರೊಬ್ಬರ ಸಲಹೆಯಂತೆ ರಾಜ್ಯ ಸರ್ಕಾರದ ಯೋಜನೆಯಾದ ಕಬೀರ ಅಂತ್ಯಸಂಸ್ಕಾರ ಯೋಜನೆಯಡಿ ಶವಸಂಸ್ಕಾರಕ್ಕೆ ಹಣ ಪಡೆಯಲು ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿದ್ದಾರೆ.
ಅಲ್ಲಿನ ಅಧಿಕಾರಿ ಕಮಲೇಶ್ ಕುಮಾರ್, ಕಬೀರ ಅಂತ್ಯಸಂಸ್ಕಾರ ಯೋಜನೆಯಡಿ ಈಗಾಗಲೇ ಹತ್ತಾರು ಮಂದಿಗೆ 2ರಿಂದ 3 ಲಕ್ಷ ರೂ.ಗಳನ್ನು ನೀಡಿದ್ದೇವೆ. ಬೊಕ್ಕಸದಲ್ಲಿ ಹಣವಿಲ್ಲ, ಹೀಗಾಗಿ ಹಣ ನೀಡಲು ಸಾಧ್ಯವಿಲ್ಲ ಎಂದು ಮೃತರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಅಧಿಕಾರಿಯ ಮಾತುಗಳನ್ನು ಕೇಳಿದ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶಗೊಂಡು ಮೃತದೇಹವನ್ನು ನೇರವಾಗಿ ಸರ್ಕಾರಿ ಕಚೇರಿಗೆ ಕೊಂಡೊಯ್ದಿದ್ದಾರೆ. ನಂತರ ಕಚೇರಿಯ ಮುಂದೆ ಕೆಲಹೊತ್ತು ಮೃತದೇಹವನ್ನು ಇರಿಸಿ ಪ್ರತಿಭಟಿಸಿದ್ದಾರೆ. ಅಧಿಕಾರಿಗಳು ಮಧ್ಯಪ್ರವೇಶಿಸಿ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಲು ದೇಣಿಗೆ ನೀಡಲು ಮುಂದಾಗಿದ್ದಾರೆ.
ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕಚೇರಿಯ ಬಿಪಿಆರ್‌ಒ ಪ್ರತಿಕ್ರಿಯಿಸಿ, ಮೃತರ ಕುಟುಂಬಸ್ಥರು ಪಂಚಾಯಿತಿ ಕಾರ್ಯದರ್ಶಿ ಬಳಿ ಹಣ ಪಡೆಯಲು ಪ್ರಯತ್ನಿಸಿದರು. ಬಳಿಕ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಸ್ಥಳೀಯ ಚಿತಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂದರು.