ಬಗಹಾ( ಬಿಹಾರ): ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಹಾದ ನೌರಂಗಿಯಾ ಗ್ರಾಮದಲ್ಲಿ ತೀರಾ ಹಳೆಯ ಕಾಲದ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಇಲ್ಲಿ ಬೈಸಾಖ್ ಹಬ್ಬದ ಒಂಬತ್ತನೇ ದಿನದಂದು ಹಳ್ಳಿಯ ಜನರು ತಮ್ಮ ಮನೆಗಳನ್ನು ತೊರೆದು ಹಳ್ಳಿಯಿಂದ ಅರಣ್ಯಕ್ಕೆ ಹೋಗುವ ಸಂಪ್ರದಾಯವನ್ನು ಇನ್ನೂ ಪಾಲನೆ ಮಾಡುತ್ತಿದ್ದಾರೆ.
ಈ ವಿಶಿಷ್ಟ ಸಂಪ್ರದಾಯದ ಪ್ರಕಾರ ಗ್ರಾಮವನ್ನು ತೊರೆದು 12 ಗಂಟೆಗಳ ಕಾಲ ಅರಣ್ಯದಲ್ಲಿ ಸಮಯ ಕಳೆಯುತ್ತಾರೆ. ದೇವಿಯ ಕೃಪೆಗೆ ಪಾತ್ರರಾಗಲು ಇಲ್ಲಿನ ಜನ ಈ ರೀತಿಯ ಆಚರಣೆ ಮಾಡುತ್ತಾರಂತೆ. ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಎಲ್ಲರೂ ಗ್ರಾಮವನ್ನು ತೊರೆಯುವುದರಿಂದ ಹಳ್ಳಿಯಲ್ಲಿ ನೀರವ ಮೌನ ಆವರಿಸುತ್ತದೆ.
ಏತಕ್ಕಾಗಿ ಈ ಆಚರಣೆ?:ಇದು ಇಲ್ಲಿನ ಜನರ ಪ್ರಾಚೀನ ನಂಬಿಕೆ. ಮನೆಗಳನ್ನು ತೊರೆದು ಕೆಲ ಹೊತ್ತು ಕಾಡಿಗೆ ಹೋಗುವುದರಿಂದ ದೇವಿಯು ಕೋಪದಿಂದ ಮುಕ್ತಿ ಹೊಂದುತ್ತಾಳೆ ಎನ್ನುತ್ತಾರೆ ಇಲ್ಲಿನ ಜನರು. ಈ ಹಬ್ಬದ ನಿಮಿತ್ತ ಜಾನುವಾರುಗಳನ್ನೂ ಕರೆದುಕೊಂಡು ಎಲ್ಲರೂ ಕಾಡಿಗೆ ಹೋಗುತ್ತಾರೆ. ತಾರು ಸಮುದಾಯದ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ಇಂದಿಗೂ ಈ ವಿಶಿಷ್ಟ ಪದ್ಧತಿ ಜೀವಂತವಾಗಿದೆ.