ಶೆಲ್ಗಾಂವ್(ಮಹಾರಾಷ್ಟ್ರ): ಸಾಮಾನ್ಯವಾಗಿ ನೀರಾವರಿ ವ್ಯವಸ್ಥೆ ಅಥವಾ ಕುಡಿಯುವ ನೀರಿಗಾಗಿ ಜನರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾರೆ. ಆದರೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಶೆಲ್ಗಾಂವ್ ಗ್ರಾಮದ ನಿವಾಸಿಗಳು ತಮ್ಮ ಗ್ರಾಮದಲ್ಲಿ ಮಂಜೂರಾಗಿರುವ ಕೆರೆಯ ವಿರುದ್ಧವೇ ಪ್ರತಿಭಟನೆಯನ್ನು ನಡೆಸಿದ್ದಾರೆ. ಶೆಲ್ಗಾಂವ್ ಗ್ರಾಮಸ್ಥರು ಗಣರಾಜ್ಯೋತ್ಸವ ದಿನದಂದೇ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು.
ಗ್ರಾಮದಲ್ಲಿ ಕೆರೆ ಹೂಳೆತ್ತಿದರೆ ಮನೆ, ಕೃಷಿ ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಎಂಬುದೇ ಇಲ್ಲಿನ ಜನರ ಪ್ರಮುಖ ಆತಂಕ. ನಾಂದೇಡ್ ಜಿಲ್ಲೆಯ 1500 ಜನರಿರುವ ಶೆಲ್ಗಾಂವ್ ಗ್ರಾಮವು ಪ್ರಾಥಮಿಕವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. 2021ರಲ್ಲಿ ಈ ಗ್ರಾಮಕ್ಕೆ ಕೆರೆ ನಿರ್ಮಿಸಲು ಯೋಜನೆ ಮಂಜೂರಾಗಿದೆ. ಆದರೆ ಕೆರೆಗಾಗಿ ಗ್ರಾಮದ ಕೃಷಿ ಹಾಗೂ ಹಲವು ಮನೆಗಳು ನಷ್ಟವಾಗುವುದರಿಂದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ:ಬುಧವಾರ ಗ್ರಾಮದಲ್ಲಿ ಒಂದೇ ಒಂದು ಅಡುಗೆ ಒಲೆ ಉರಿಯಲಿಲ್ಲ. ಇಡೀ ಗ್ರಾಮವೇ ಉಪವಾಸ ಸತ್ಯಾಗ್ರಹ ನಡೆಸಿತ್ತು. ಲಿಂಬೋಟಿ ಅಣೆಕಟ್ಟಿನಿಂದಾಗಿ ಶೆಲ್ಗಾಂವ್ ಜನರು ಹೇರಳವಾಗಿ ನೀರನ್ನು ಪಡೆಯುತ್ತಾರೆ. ಇಲ್ಲಿನ ರೈತರು ನೀರಿನಿಂದ ಸಮೃದ್ಧರಾಗಿದ್ದಾರೆ. ಆದರೆ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೆರೆ ತಮಗೆ ದೊಡ್ಡ ಅಪಾಯವೆಂದೇ ಗ್ರಾಮಸ್ಥರು ಪರಿಗಣಿಸಿದ್ದಾರೆ. ಒಂದು ವೇಳೆ ಕೆರೆ ನಿರ್ಮಾಣವಾದಲ್ಲಿ ಸುಮಾರು 650 ಹೆಕ್ಟೇರ್ ಭೂಮಿ ನಷ್ಟವಾಗಲಿದ್ದು, 300ಕ್ಕೂ ಹೆಚ್ಚು ರೈತರು ಭೂರಹಿತರಾಗಲಿದ್ದಾರಂತೆ. ಇದಲ್ಲದೇ ಗ್ರಾಮದಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಗ್ರಾಮಸ್ಥರು ಕೆರೆ ನಿರ್ಮಾಣಕ್ಕೆ ವಿರೋಧದ ನಿಲುವು ತಳೆದಿದ್ದಾರೆ. ಅಲ್ಲದೇ ಊರಿನ ಜನರು ಕೆರೆ ಒತ್ತುವರಿ ರದ್ದುಪಡಿಸುವವರೆಗೂ ಹೋರಾಟ ಮುಂದುವರೆಸಲು ಒಮ್ಮತದ ನಿರ್ಧಾರವನ್ನು ಕೈಗೊಂಡಿದ್ದಾರೆ.