ಜೆಹಾನಾಬಾದ್(ಬಿಹಾರ):10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿರುವ ಪ್ರಿಯಾಂಶು ಕುಮಾರಿ ಐಎಎಸ್ ಆಗುವ ಕನಸು ಕಂಡಿದ್ದು, ಆಕೆಯ ಆಸೆ ಈಡೇರಿಸಲು ಇದೀಗ ಇಡೀ ಗ್ರಾಮವೇ ಒಂದಾಗಿದೆ. ಅದಕ್ಕೋಸ್ಕರ ಸಮಿತಿ ರಚನೆ ಮಾಡಿರುವ ಗ್ರಾಮದ ಜನರು, ಹಣಕಾಸು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬಿಹಾರದಲ್ಲಿ 10ನೇ ತರಗತಿ ಪರೀಕ್ಷಾ ಫಲಿತಾಂಶ ಬಹಿರಂಗಗೊಂಡಿದ್ದು, ಜೆಹಾನಾಬಾದ್ ಜಿಲ್ಲೆಯ ಸುಮೇರಾ ಗ್ರಾಮದ ನಿವಾಸಿ ಪ್ರಿಯಾಂಶು ಕುಮಾರಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತಮ್ಮ ಕುಟುಂಬ, ಗ್ರಾಮ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾರೆ. ಆದರೆ, ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಮನೆಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿಲ್ಲ. ಜೊತೆಗೆ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಆಗುವ ಕನಸು ಕಾಣುತ್ತಿರುವ ವಿದ್ಯಾರ್ಥಿನಿಗೆ ಆರ್ಥಿಕ ಸಮಸ್ಯೆ ದೊಡ್ಡ ಸವಾಲಾಗಿದೆ. ಇದೀಗ ಬಾಲಕಿಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರೆಲ್ಲಾ ಒಂದಾಗಿದ್ದು, ಆಕೆಯ ಕನಸಿಗೆ ರೆಕ್ಕೆಪುಕ್ಕ ಬಂದಿವೆ.
ಪ್ರಿಯಾಂಶು ಉನ್ನತ ವ್ಯಾಸಂಗ ಮಾಡಲು ನೆರವು ನೀಡಲು ಇದೀಗ ಜಿಲ್ಲೆಯ ಶ್ರೀಮಂತರು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಮುಂದಾಗಿದ್ದಾರೆ. ಇದಕ್ಕಾಗಿ ಸಮಿತಿ ರಚನೆ ಮಾಡಿದ್ದು, ಅದರಲ್ಲಿ ನಿವೃತ್ತ ಯೋಧ ಸಂತೋಷ್ ಕುಮಾರ್, ಪಂಚಾಯ್ತಿ ಮಾಜಿ ಅಧ್ಯಕ್ಷ ದಯಾನಂದ್ ಪ್ರಸಾದ್, ಜಿಲ್ಲಾ ಚುನಾವಣಾ ಯೂತ್ ಐಕಾನ್ ಅಮಿತ್ ಕುಮಾರ್ ಸೇರಿದಂತೆ ಅನೇಕರು ಇದ್ದಾರೆ.