ಕಂಕೇರ್: ಛತ್ತೀಸ್ಗಢದಲ್ಲಿ ಒಂದೆಡೆ ನಕ್ಸಲರ ಹಾವಳಿ, ಮತ್ತೊಂದೆಡೆ ಆನೆಗಳ ದಾಳಿ.. ನಕ್ಸಲರಿಂದ ರಕ್ಷಣೆ ಪಡೆಯಬೇಕೋ, ಆನೆಗಳಿಂದ ಜೀವ ಉಳಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲಿರುವ ಜನರು, ತಾವಾಗಿಯೇ ಬಂದು ಜೈಲಿಗೆ ಸೇರುತ್ತಿದ್ದಾರೆ. ಹೌದು, ಜಿಲ್ಲೆಯ ಭಾನುಪ್ರತಾಪಪುರ ಬ್ಲಾಕ್ನಲ್ಲಿ ಕಾಡಾನೆಗಳ ಹಾವಳಿ ಜೋರಾಗಿದ್ದು, ದಿಕ್ಕುತೋಚದ ಜನ ಜೈಲಿನಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ.
ಭಾನುಪ್ರತಾಪಪುರ ಠಾಣೆಯಲ್ಲಿ ನೂತನ ಜೈಲು ನಿರ್ಮಿಸಲಾಗಿದೆ. ಆನೆಗಳ ಕಾಟಕ್ಕೆ ಬೇಸತ್ತ 400ಕ್ಕೂ ಅಧಿಕ ಸಾರ್ವಜನಿಕರು ಹಗಲಿರುಳು ಎನ್ನದೇ ನಡೆದು ಜೈಲಿಗೆ ಬಂದು ಸೇರುತ್ತಿದ್ದಾರೆ. ಕಳೆದ 15 ದಿನಗಳಿಂದ ಭಾನುಪ್ರತಾಪಪುರದಿಂದ 10 ಕಿ.ಮೀ ದೂರದಲ್ಲಿರುವ ಪಿಚೆಟ್ಟಾದಲ್ಲಿ 30 ಆನೆಗಳ ಗುಂಪೊಂದು ಅಡ್ಡಾಡುತ್ತಿದೆ. ಹಗಲು ಹೊತ್ತಲ್ಲಿ ಕಾಡಲ್ಲಿ ವಿಶ್ರಾಂತಿ ಪಡೆಯುವ ಗಜಪಡೆ ರಾತ್ರಿಯಾಗುತ್ತಿದ್ದಂತೆ ಹಳ್ಳಿಗಳಿಗೆ ಎಂಟ್ರಿ ಕೊಡುತ್ತವೆ.
ಈಗಾಗಲೇ ಜಶ್ಪುರದಲ್ಲಿ ಆನೆ ದಾಳಿಯಿಂದ ಇಬ್ಬರು ಗ್ರಾಮಸ್ಥರು ಮೃತಪಟ್ಟಿದ್ದು, ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದೆ. ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಮಕ್ಕಳನ್ನೆದೇ ಎಲ್ಲರೂ ಹೋಗಿ ಜೈಲಿನಲ್ಲಿ ಆಶ್ರಯಪಡುತ್ತಿದ್ದಾರೆ. ಆನೆಗಳಿಗೆ ಹೆದರಿ ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದರೆ, ಮಕ್ಕಳಿಗೆ ಸರಿಯಾದ ಆಹಾರ ಸಿಗುತ್ತಿಲ್ಲ ಎಂದು ಮಹಿಳೆ ಗೋಗರೆಯುತ್ತಾಳೆ.