ಜಾನ್‌ಪುರ್, ಉತ್ತರಪ್ರದೇಶ :ಯುವಕನೊಬ್ಬ ತನ್ನ ಸ್ನೇಹಿತನೊಂದಿಗೆ ನಡೆದ ಜಗಳದಲ್ಲಿ ಸಾವನ್ನಪ್ಪಿದ್ದು, ಈ ಘಟನೆಯ ನಂತರ ಗ್ರಾಮಸ್ಥರು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಉತ್ತರಪ್ರದೇಶದ ಜಾನ್‌ಪುರ ಜಿಲ್ಲೆಯ ಗೌರಬಾದ್‌ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯ ಧರ್ಮಪುರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಮಾಹಿತಿ ನೀಡಿದ್ದು, ಧರ್ಮಪುರ ಠಾಕುರ್ಚಿ ಗ್ರಾಮದ ಕುಸ್ತಿಪಟು ಬಾದಲ್ ಯಾದವ್ (21) ತನ್ನ ಸ್ನೇಹಿತ ಅಂಕಿತ್ ಯಾದವ್ (25) ಅವರೊಂದಿಗೆ ಅಂಗಡಿಯಲ್ಲಿ ಮೊಟ್ಟೆ ತಿನ್ನುತ್ತಿದ್ದಾಗ ವೈಯಕ್ತಿಕ ದ್ವೇಷದ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಅಂಕಿತ್ ಮತ್ತು ಆತನ ಸ್ನೇಹಿತ ಅಂಗಡಿಯಲ್ಲಿದ್ದ ಚಾಕುವಿನಿಂದ ಬಾದಲ್ ಯಾದವ್ಗೆ ಇರಿದಿದ್ದಾನೆ.
ನಂತರ ಇಬ್ಬರೂ ಸ್ಥಳದಿಂದ ಓಡಿ ಹೋಗಿದ್ದು, ಬಾದಲ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾದಲ್ ಮೃತಪಟ್ಟಿದ್ದಾನೆ. ನಂತರ ಅಂಕಿತ್ ಮತ್ತು ಅವನ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶಗೊಂಡು ಸರ್ಕಾರಿ ಆ್ಯಂಬುಲೆನ್ಸ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಗ್ರಾಮದ ಮುಖ್ಯಸ್ಥ ಗ್ರಾಮಸ್ಥರನ್ನು ಪ್ರಚೋದಿಸಿ ಗಲಾಟೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಡುರಸ್ತೆಯಲ್ಲೇ ಯುವತಿ ಜೀವಂತ ಸುಟ್ಟ ದುಷ್ಕರ್ಮಿಗಳು.. ಸಹಾಯಕ್ಕಾಗಿ ಅಂಗಲಾಚಿದ್ರೂ ಬಾರದ ಜನ!