ತಿರುವನಂತಪುರಂ:ವಿಜಯದಶಮಿ ಹಿನ್ನೆಲೆ ಜಿಲ್ಲೆಯ ಪೂಜಾಪುರದ ಸರಸ್ವತಿ ದೇವಸ್ಥಾನದಲ್ಲಿ 'ವಿದ್ಯಾರಂಭಂ' ಆಚರಿಸಲಾಗಿದ್ದು, ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ನವರಾತ್ರಿಯ ಕೊನೆಯದಿನವಾದ ಇಂದು ರಾಜ್ಯಾದ್ಯಂತ ವಿದ್ಯಾರಂಭಂ ಆಚರಿಸಲಾಗುತ್ತದೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ 'ವಿದ್ಯಾರಂಭಂ' ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. ದೇವಸ್ಥಾನಕ್ಕೆ ಬಂದಿದ್ದ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೂ ಮೊದಲು ಪುರೋಹಿತರು ದೇವರ ಸ್ತೋತ್ರಗಳನ್ನ ಉಚ್ಚರಿಸುತ್ತ, ಅಕ್ಕಿಯಲ್ಲಿ 'ಹರಿ ಶ್ರೀ' ಎಂದು ಬರೆಸುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು. ಬೆಳಗ್ಗೆ 5 ಗಂಟೆಯಿಂದಲೆ ಜನರು ದೇವಸ್ಥಾನಕ್ಕೆ ಬಂದು ತಮ್ಮ ಮಕ್ಕಳಿಗೆ ಅಕ್ಷರಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರು ಭಾಗಿಯಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಈ ಕುರಿತು ಕೇರಳದ ರಾಜಭವನದ ಪಿಆರ್ಒ ಟ್ವೀಟ್ ಮಾಡಿದ್ದು, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರೀಫ್ ಮೊಹಮ್ಮದ್ ಖಾನ್ ಅವರು ವಿಜಯದಶಮಿ ಹಿನ್ನೆಲೆ ತಿರುವಂತಪೂರಂನ ಪೂಜಾಪುರದ ಸರಸ್ವತಿ ದೇವಸ್ಥಾನಕ್ಕೆ ಭೇಟಿ ನೀಡಿ ಮಕ್ಕಳಿಗೆ ಅಕ್ಷರಾಭ್ಯಾಸಕ ಮಾಡಿಸುವ ಮೂಲಕ ಅಕ್ಷರ ಮತ್ತು ಜ್ಞಾನದ ಜಗತ್ತಿಗೆ ಪರಿಚಯಿಸಿದರು ಎಂದು ಟ್ವೀಟ್ ಮಾಡಿದ್ದಾರೆ.