ನವದೆಹಲಿ:ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಲಕ್ಷ್ಯ ಸಿಂಘಾಲ್ ಎಂಬವರು ತನ್ನ ಗುರುಗಳನ್ನು ತಮ್ಮ ಕಚೇರಿಗೆ ಸ್ವಾಗತಿಸಿ ತಮ್ಮ ಅಧಿಕೃತ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿ, ಗೌರವಿಸಿರುವ ವಿಡಿಯೋ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟು ಹಾಕಿದೆ. ಈ ಅಧಿಕಾರಿ ಪ್ರಸ್ತುತ ನೈಋತ್ಯ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವೈರಲ್ ವೀಡಿಯೊದಲ್ಲಿ, ಸಿಂಘಾಲ್ ಅವರು ಕೈ ಮುಗಿದು ಗುರುಗಳನ್ನು ಪ್ರೀತಿಯಿಂದ ಸ್ವಾಗತಿಸುತ್ತಿರುವುದನ್ನು ನೋಡಬಹುದು. ಇದೇ ವೇಳೆ ಶಾಲು ಹೊದಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಅಧಿಕೃತ ಕುರ್ಚಿ ಮೇಲೆ ಕೂರುವಂತೆ ಮನವಿ ಮಾಡುತ್ತಿರುವುದು ಕಂಡುಬರುತ್ತದೆ.
ಸಿಂಘಾಲ್ ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ (AGMUT) ಕೇಡರ್‌ನ 2019ರ ಬ್ಯಾಚ್‌ನ IAS ಅಧಿಕಾರಿ. ವರದಿಗಳಂತೆ, ವಿಡಿಯೋ ವೈರಲ್ ಆದ ಕೂಡಲೇ ಎಚ್ಚೆತ್ತ ಕಂದಾಯ ಇಲಾಖೆ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಿಂಘಾಲ್ ಅವರಿಂದ ಸೂಕ್ತ ಉತ್ತರ ಕೇಳಿದೆ. ನಾವು ವೈರಲ್ ವಿಡಿಯೋ ಗಮನಿಸಿದ್ದೇವೆ. ಅವರು ಸಾರ್ವಜನಿಕ ಕಚೇರಿಯಲ್ಲಿ ಗುರುಗಳನ್ನು ಏಕೆ ಈ ರೀತಿ ಗೌರವಿಸಿದ್ದಾರೆ ಎಂಬುದರ ಕುರಿತು ಉತ್ತರ ನೀಡುವಂತೆ ಕೇಳಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ಅಧಿಕಾರಿ ಸಿಂಘಾಲ್, ತಾನು ನಾಗರಿಕ ಸೇವೆಗೆ ಬರಲು ಸಲಹೆ ನೀಡಿದ ಗುರುಗಳು ಅವರು. ಆದ್ದರಿಂದ, ಕೃತಜ್ಞತೆ ಮತ್ತು ಗೌರವದ ಸಂಕೇತವಾಗಿ ಸನ್ಮಾನಿಸಲು ಕಚೇರಿಗೆ ಆಹ್ವಾನಿಸಿದ್ದೆ ಎಂದಿರುವುದಾಗಿ ಹಿರಿಯ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.