ರಾಮನಗರ(ಉತ್ತರಾಖಂಡ):ಜನವಸತಿ ಪ್ರದೇಶದಲ್ಲಿ ಹುಲಿಯೊಂದು ಹಠಾತ್ ಪ್ರತ್ಯಕ್ಷವಾಗಿ ಯುವಕನ ಮುಂದೆಯೇ ಮಿಂಚಿನಂತೆ ಹಾದು ಹೋದ ಘಟನೆ ಉತ್ತರಾಖಂಡ್ನಲ್ಲಿ ಇಂದು ಬೆಳಿಗ್ಗೆ ನಡೆಯಿತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕ ಹುಲಿ ಕಂಡು ಬೆಚ್ಚಿಬಿದ್ದಿದ್ದು, ಎರಡು ಹೆಜ್ಜೆ ಹಿಂದಿಟ್ಟು ಸಂಭವನೀಯ ದಾಳಿಯಿಂದ ಬಚಾವ್ ಆಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಮತ್ತು ರಾಮನಗರ ಅರಣ್ಯ ವಿಭಾಗಕ್ಕೆ ಹೊಂದಿಕೊಂಡಿರುವ ಗಾರ್ಜಿಯಾ ದೇವಸ್ಥಾನ ಸಮೀಪದ ರಾಷ್ಟ್ರೀಯ ಹೆದ್ದಾರಿ 309ರಲ್ಲಿ ಹುಲಿ ಕಾಣಿಸಿಕೊಂಡಿದೆ. ಇದೇ ರಸ್ತೆಯಲ್ಲಿ ಯುವಕ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಹುಲಿ ಕಂಡು ಗಾಬರಿಯಾದ ಆತ ಹಿಂದಕ್ಕೆ ಸರಿಯುತ್ತಾನೆ. ಆಗ ಹುಲಿ ತನ್ನಷ್ಟಕ್ಕೆ ತಾನು ರಸ್ತೆ ದಾಟಿಕೊಂಡು ಅರಣ್ಯದಲ್ಲಿ ಮರೆಯಾಗುತ್ತದೆ. ಘಟನೆಯಿಂದ ಯುವಕ ನಿಟ್ಟುಸಿರುಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಹೆಚ್ಚಿದ ಹುಲಿ, ಚಿರತೆಗಳ ಹಾವಳಿ:ರಾಮನಗರ ಅರಣ್ಯ ವಿಭಾಗದ ಜನವಸತಿ ಪ್ರದೇಶದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಕಾಡುಪ್ರಾಣಿಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದೀಗ ಹಗಲು ಹೊತ್ತಲ್ಲೇ ಹುಲಿ ಕಾಣಿಸಿಕೊಂಡು, ರಸ್ತೆಗೆ ಬಂದಿರುವುದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಯದ ವಾತಾವರಣ ಉಂಟುಮಾಡಿದೆ.