ಪಾಟ್ನಾ (ಬಿಹಾರ): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಮ್ಮನಗಲಿ ಒಂದೂವರೆ ವರ್ಷ ಕಳೆದಿದೆ. ಆದರೂ ಬಿಹಾರದ ಸಹರ್ಸಾ ನಿವಾಸಿಗಳು ಮಾತ್ರ "ಬಾಲಿವುಡ್‌ನ ಧೋನಿ ಮೊನ್ನೆಯಷ್ಟೇ ಇಲ್ಲಿಗೆ ಬಂದಿದ್ದರು. ನಮ್ಮೊಂದಿಗೆ ಕ್ರಿಕೆಟ್ ಆಡಿದ್ದರು" ಎಂದು ಇಂದಿಗೂ ನೆನೆಪಿಸಿಕೊಳ್ಳುತ್ತಾರೆ.
ಹೌದು.. ಸುಶಾಂತ್ ಸಿಂಗ್ 2019 ರ ಮೇ 13 ರಂದು ಸಹರ್ಸಾ ಜಿಲ್ಲೆಯಲ್ಲಿರುವ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ಮಕ್ಕಳು, ಯುವಕರೊಂದಿಗೆ ಕ್ರಿಕೆಟ್ ಆಡಿದ್ದರು. ಈ ದೃಶ್ಯದ ವಿಡಿಯೋ ಇಂದಿಗೂ ಅಲ್ಲಿನ ಜನರ ಮೊಬೈಲ್ ಫೋನ್‌ಗಳಲ್ಲಿದೆ. ಎಷ್ಟೋ ಮಂದಿ ಅಂದು ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇಂದು ಸುಶಾಂತ್ರ 36ನೇ ವರ್ಷದ ಜನ್ಮದಿನದ ಹಿನ್ನೆಲೆ ಅವರೆಲ್ಲರೂ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ನಟನನ್ನು ನೆನೆಯುತ್ತಿದ್ದಾರೆ.