ಮಿಜೋರಾಂ :ಬೆಟ್ಟದ ಮಧ್ಯೆ ನೀರು ಹರಿಯುವುದನ್ನು ನೋಡಿರುತ್ತೀರಿ. ಆದರೆ, ಮೋಡಗಳೇ ಜಲಪಾತವಾದರೆ ಹೇಗಿರಬಹುದು ಎಂದು ಊಹಿಸಿಕೊಂಡರೆ ಅರೆ, ವ್ಹಾ.! ಎಂಥಾ ಅದ್ಭುತ ಕಲ್ಪನೆ ಎನಿಸದೇ ಇರದು. ಅಂತಹ ಸುಂದರ ಕಲ್ಪನಾಲೋಕ ಇಲ್ಲಿ ನೈಜವಾಗಿದೆ. ಈ ರಮಣೀಯ ದೃಶ್ಯ ಮಿಜೋರಾಂನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ಮೋಡದ ಜಲಪಾತದ ಅದ್ಭುತ ವಿಡಿಯೋವನ್ನು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಶೇರ್ ಮಾಡಿದ್ದಾರೆ. ಈ ದೃಶ್ಯವನ್ನು ಈಶಾನ್ಯ ಭಾರತದ ಮಿಜೋರಾಂನ ಐಜ್ವಾಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ನಿಸರ್ಗದ ಅಚ್ಚರಿಯ ಎದುರು ಮನುಷ್ಯ ಮೂಕವಿಸ್ಮಿತನಾಗುತ್ತಾನೆ ಎನ್ನುವುದಕ್ಕೆ ಈ ಅದ್ಭುತ ದೃಶ್ಯವೇ ಸಾಕ್ಷಿ.
ಮೋಡದ ಜಲಪಾತಗಳ ರಚನೆಗೆ ಆಕಾರ ನೀಡಲು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳು ಬೇಕಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಪರ್ವತ ವಿಜ್ಞಾನದಲ್ಲಿ ಇದನ್ನು ‘ಒರೊಗ್ರಾಫಿಕ್ ಕ್ಲೌಡ್ಸ್’(orographic clouds) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು ಜಲಪಾತದ ಮೋಡಗಳು ಎಂದೂ ಗುರುತಿಸಲಾಗುತ್ತದೆ. ಪರ್ವತ ಪ್ರದೇಶದ ತೇವಾಂಶಯುಕ್ತ ಗಾಳಿಯಿಂದ ಮೋಡಗಳು ಇಲ್ಲಿ ಜಲಪಾತದಂತೆ ಕಾಣುತ್ತವೆಯಂತೆ.