ದಿಯು: ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ಪ್ಯಾರಾಚೂಟ್‌ನ ಹಗ್ಗ ತುಂಡಾಗಿ ಎತ್ತರಕ್ಕೆ ಹಾರಿದ್ದ ದಂಪತಿ ಸಮುದ್ರಕ್ಕೆ ಬಿದ್ದಿರುವ ಘಟನೆ ದಿಯು ಕರಾವಳಿಯಲ್ಲಿ ನಡೆದಿದೆ.
ಪ್ಯಾರಾಚೂಟ್‌ನಲ್ಲಿ ದಂಪತಿ ಎತ್ತರಕ್ಕೆ ಹೋದ ಬಳಿಕ ಪವರ್ ಬೋಟ್‌ಗೆ ಕಟ್ಟಲ್ಪಟ್ಟಿದ್ದ ಹಗ್ಗ ತುಂಡಾಗಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ರಾಹುಲ್ ಧರೇಚ ಎಂಬುವವರು ಟ್ವಿಟ್ಟರ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ಗುಜರಾತ್ ಮೂಲದ 30 ವರ್ಷದ ಅಜಿತ್ ಕಥಾಡ್ ಮತ್ತವರ ಪತ್ನಿ ಸರಳಾ ಕಥಾಡ್(31) ಕಳೆದ ಭಾನುವಾರ ದಿಯುವಿನ ನಾಗೋವಾ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ಅವರ ಪ್ಯಾರಾಚೂಟ್‌ನ ಹಗ್ಗ ತುಂಡಾದ ಪರಿಣಾಮ ಸಮುದ್ರದ ಕಡೆಗೆ ಅವರು ಪ್ಯಾರಾಚೂಟ್‌ನಲ್ಲೇ ಹೋಗಿದ್ದಾರೆ. ಕೂಡಲೇ ಇದನ್ನು ಗಮಿಸಿದ ಬೀಚ್‌ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಪರಿಣಾಮ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ದಂಪತಿ ಸಮುದ್ರಕ್ಕೆ ಧುಮುಕುತ್ತಿದ್ದಂತೆ ಪವರ್‌ಬೋಟ್‌ನಲ್ಲಿದ್ದ ಅಜಿತ್ ಕ್ಯಾಥಡ್ ಅವರ ಸಹೋದರ ರಾಕೇಶ್ ಕಥಾಡ್ ಜೋರಾಗಿ ಕಿರುಚಾಡಿದ್ದಾರೆ. ನಾನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದೆ, ಹಗ್ಗ ಮುರಿದಾಗ ಏನು ಮಾಡಬೇಕೆಂದು ನನಗೆ ತೋಚಲಿಲ್ಲ. ನನ್ನ ಸಹೋದರ ಮತ್ತು ಅತ್ತಿಗೆ ಬಹಳ ಎತ್ತರದಿಂದ ಸಮುದ್ರಕ್ಕೆ ಬೀಳುವುದನ್ನು ನಾನು ನೋಡಿದೆ. ಆ ಕ್ಷಣದಲ್ಲಿ ನಾನು ಅಸಹಾಯಕನಾಗಿದ್ದೆ ಎಂದು ರಾಕೇಶ್ ಘಟನೆಯನ್ನು ವಿವರಿಸಿದ್ದಾರೆ.
ನಾಗೋವಾ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ಸೇವೆ ನಡೆಸುತ್ತಿರುವ ಖಾಸಗಿ ಸಂಸ್ಥೆ ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್‌ಸ್ಪೋರ್ಟ್ಸ್‌ನ ಜೀವರಕ್ಷಕರು ಅಂತಿಮವಾಗಿ ದಂಪತಿಯನ್ನು ರಕ್ಷಿಸಿದ್ದಾರೆ.