ಹರಿದ್ವಾರ (ಉತ್ತರಾಖಂಡ):ನಮ್ಮೂರಲ್ಲಿ ರಸ್ತೆ ಇಲ್ಲ, ಚರಂಡಿ ಇಲ್ಲ, ನೀರಿನ ಸಮಸ್ಯೆ ಅಂತೆಲ್ಲಾ ಜನರು ಅಧಿಕಾರಿಗಳಿಗೆ ಪತ್ರ ಬರೆಯೋದು ಸಹಜ. ಆದರೆ, ಉತ್ತರಾಖಂಡದ ಹರಿದ್ವಾರದ ಜನರು ಏಕಾಏಕಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ, ರಾಷ್ಟ್ರಪತಿಗೆ ಪತ್ರ ರವಾನಿಸಿದ್ದು, ಅದ್ಯಾವ್ ದೊಡ್ಡ ವಿಷ್ಯ ಅಂತೀರಾ. ಇಲ್ಲೇ ಇರೋದು ಅಚ್ಚರಿ.
ಹರಿದ್ವಾರದಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ಬೀದಿ ನಾಯಿಗಳು ದಾಳಿ ಮಾಡಿ 700ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿವೆಯಂತೆ. ರೂರ್ಕಿ, ಲಕ್ಸರ್, ಬಹದ್ದೂರಾಬಾದ್, ಜ್ವಾಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಕರಣಗಳು ನಡೆದಿವೆ. ಪತ್ತೆ ಮಾಡುತ್ತಾ ಹೋದರೆ, ಈ ಸಂಖ್ಯೆ 1,000 ದಾಟಿದೆ. ಇಷ್ಟೇ ಅಲ್ಲ, ಕಳೆದ 6 ತಿಂಗಳಲ್ಲಿ ಹರಿದ್ವಾರದಲ್ಲಿ ನಾಯಿ ಕಡಿತದಿಂದ 7,000 ಮಂದಿ ಗಾಯಗೊಂಡಿರುವುದು ಅಚ್ಚರಿಯ ಸಂಗತಿ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ, ಅಧಿಕಾರಿಗಳ್ಯಾರೂ ಗಂಭೀರವಾಗಿಲ್ಲ ಎಂದು ಆರೋಪಿಸಿ ಹರಿದ್ವಾರ ನಿವಾಸಿಯಾದ ಲಲಿತ್ ಶರ್ಮಾ ಎಂಬವರು, ನಗರವನ್ನು ಅಪಾಯದಿಂದ ರಕ್ಷಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದಾರೆ. ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳಿಂದ ಜನರು ತೊಂದರೆಗೀಡಾಗಿದ್ದಾರೆ. ಅತಿಥಿಗಳು ಮತ್ತು ಸಂಬಂಧಿಕರು ಮನೆಗಳಿಗೆ ಭೇಟಿ ನೀಡಲೂ ಹೆದರುವಂತಾಗಿದೆ. ಮಕ್ಕಳು ಕೂಡ ಹೊರಗೆ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ಶರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಸ್ಪತ್ರೆ ತುಂಬಾ ನಾಯಿ ಕಡಿತ ರೋಗಿಗಳು:ಹರಿದ್ವಾರದ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಸುಮಾರು 30 ರಿಂದ 40 ಜನರು ಬೀದಿನಾಯಿ ಕಡಿತದಿಂದ ಬರುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯ ಡಾ.ವಿಕಾಸ್‌ದೀಪ್ ಮಾತನಾಡಿ, ನಾಯಿ ಕಚ್ಚಿದವರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ತಕ್ಷಣ ಚುಚ್ಚುಮದ್ದು ಹಾಕಲು ಪ್ರಯತ್ನಿಸುತ್ತೇವೆ. ಅಕ್ಟೋಬರ್ 5 ರಿಂದ ಅಕ್ಟೋಬರ್ 24ರ ನಡುವೆ 700 ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ 6 ತಿಂಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 7 ಸಾವಿರದಷ್ಟಿದೆ ಎಂದು ಹೇಳಿದ್ದಾರೆ.
ಹರಿದ್ವಾರ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಅನಿತಾ ಶರ್ಮಾ 'ಈಟಿವಿ ಭಾರತ್'ನೊಂದಿಗೆ ಮಾತನಾಡಿ, ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡುವ ವಿಷಯ ತನ್ನ ಗಮನಕ್ಕೆ ಬಂದಿದೆ. ನಿರಂತರವಾಗಿ ನಾಯಿ ಹಿಡಿಯುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಹೆಚ್ಚು ಅಪಾಯಕಾರಿ ನಾಯಿಗಳನ್ನು ಹಿಡಿದು ಕೇಂದ್ರಗಳಲ್ಲಿ ಕೂಡಿ ಹಾಕಲಾಗಿದೆ. ಬೀದಿನಾಯಿಗಳೊಂದಿಗೆ ಬಿಡಾಡಿ ದನಗಳು, ಮಂಗಗಳ ಕಾಟವೂ ಇಲ್ಲಿನ ನಿವಾಸಿಗಳಿಗೆ ಕಾಡುತ್ತಿದೆ ಎಂದು ಹೇಳಿದರು.
ಮಳೆಗಾಲದ ಬಳಿಕ ನಾಯಿಗಳು ತುರಿಕೆ ಮತ್ತು ಶಿಲೀಂಧ್ರಗಳ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗುತ್ತವೆ. ಇದರಿಂದಾಗಿ ಬೀದಿ ನಾಯಿಗಳು ವ್ಯಗ್ರಗೊಂಡು ಮಾನವರ ಮೇಲೆ ದಾಳಿ ಮಾಡುತ್ತವೆ. ಇದರಿಂದಾಗಿ ಕಡಿತದ ಘಟನೆಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಮೊದಲ ಪತ್ನಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದ 2ನೇ ಪತ್ನಿಯ ಕೊಂದ ಚಾರ್ಟರ್ಡ್ ಅಕೌಂಟೆಂಟ್ ಗಂಡ!