ಬೆಂಗಳೂರು:ಖೇಲೋ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟ - 2021ಕ್ಕೆ ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕೃತವಾಗಿ ಚಾಲನೆ ನೀಡಿದರು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ದೇಶಿ ಕ್ರೀಡೆ ಮಲ್ಲಗಂಬಕ್ಕೆ ಖೇಲೋ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ. ಬಣ್ಣಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೈನವಿರೇಳಿಸುವ ಮಲ್ಲಕಂಬ ಪ್ರದರ್ಶನ ವೀಕ್ಷಕರ ಮನ ಸೆಳೆಯಿತು.
ಜೀವನದಲ್ಲಿ ಮುಂದೆ ಬರಲು ಕ್ರೀಡೆ ಸಹಕಾರ ನೀಡುತ್ತದೆ. ಕ್ರೀಡೆ ಮತ್ತು ಜೀವನ ಎರಡು ಅತ್ಯಂತ ಮಹತ್ವದ ವಿಚಾರಗಳು. ಜೀವನದ ಪ್ರಗತಿಯ ಪ್ರಮುಖ ಅಂಗ ಕ್ರೀಡೆ. ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ನಮ್ಮದು. ಇದೀಗ ಫಿಟ್ ನೆಸ್ ದೇಶದ ಮಂತ್ರ ಆಗಿದೆ. ಎನ್.ಇ.ಪಿ ಯಲ್ಲಿ ಕ್ರೀಡೆಗೆ ಆದ್ಯತೆ ನೀಡಲಾಗಿದೆ. ಕ್ರೀಡೆಯ ಪವರ್ ದೇಶದ ಪವರ್ ಎಂದು ಪ್ರಧಾನಿ ಮೋದಿ ವಿಡಿಯೋ ಸಂದೇಶದಲ್ಲಿ ಹೇಳಿದರು.
ಕ್ರೀಡೆಯಲ್ಲಿ ಟೀಂ ಸ್ಪಿರಿಟ್ ಇರಬೇಕು. ಖೇಲೋ ಇಂಡಿಯಾ ಮೂಲಕ ದೇಶವನ್ನು ಪ್ರತಿನಿಧಿಸುವ ಅವಕಾಶ ಕ್ರೀಡಾಪಟುಗಳಿಗೆ ಸಿಗಲಿದೆ. ಒಲಿಂಪಿಕ್ ಕ್ರೀಡೆಯಲ್ಲಿ ಪದಕ ಗೆದ್ದವರಿಗೆ ದೇಶ ಗೆದ್ದ ಖುಷಿ ಇತ್ತು. ಈ ಹಿನ್ನೆಲೆಯಲ್ಲಿ ಖೇಲೋ ಇಂಡಿಯಾ ಉತ್ತಮ ಕ್ರೀಡಾಪಟುಗಳು ಆಗಲು ಸಹಕಾರ ನೀಡಲಿದೆ ಎಂದು ಎಲ್ಲ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದರು.
ಕನ್ನಡದಲ್ಲಿ ಸ್ವಾಗತಿಸಿದ ಉಪ ರಾಷ್ಟ್ರಪತಿ:ಕನ್ನಡದಲ್ಲಿ ಭಾಷಣ ಪ್ರಾರಂಭ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು. ಗಣ್ಯರನ್ನ ಕನ್ನಡದಲ್ಲಿಯೇ ಸ್ವಾಗತಿಸಿದರು. ಭಾರತ ಇವತ್ತು ವಿಶ್ವದ ಗಮನ ಸೆಳೆದಿದೆ. ಖೇಲೋ ಇಂಡಿಯಾ ಕ್ರೀಡಾಕೂಟವನ್ನ ಕ್ರೀಡಾಪಟುಗಳು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆ ಜೀವನ ಶೈಲಿ ಬದಲಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಅದ್ಭುತವಾಗಿ ಕ್ರೀಡಾಕೂಟ ಆಯೋಜಿಸಿದೆ ಎಂದು ಶ್ಲಾಘಿಸಿದರು.
ಕ್ರೀಡಾಪಟುಗಳಿಗೆ ಬೆಸ್ಟ್ ಫುಡ್ ಚಿಕನ್ 65 ಅಲ್ಲ ಅದು ರಾಗಿಮುದ್ದೆ ಎಂದು ಕ್ರೀಡಾಪಟುಗಳಿಗೆ ರಾಗಿ ಮುದ್ದೆ ತಿನ್ನುವಂತೆ ಸಲಹೆ ನೀಡಿದರು. ಯುವಕರು ಕ್ರೀಡೆಯನ್ನು ಜೀವನದ ಭಾಗವಾಗಿ ಸ್ವೀಕಾರ ಮಾಡಬೇಕು. ದೈಹಿಕವಾಗಿ ಬಲಿಷ್ಠರಾಗಬೇಕು. ದೇಶದ ಎಲ್ಲಾ ವಿವಿಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮವಹಿಸಬೇಕು. ಖೇಲೋ ಇಂಡಿಯಾದಲ್ಲಿ ಸಾಂಪ್ರದಾಯಿಕ, ಗ್ರಾಮೀಣ ಕ್ರೀಡೆ ಸೇರಿಸಲಾಗಿದೆ ಎಂದು ಹೇಳಿದರು.