ಜೈಪುರ: ಈ ವರ್ಷದ ಆಗಸ್ಟ್‌ನಲ್ಲಿ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ತಾವು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ ಮಮತಾ ತಮ್ಮ ವಿರುದ್ಧ ಬಹಿರಂಗವಾಗಿ ಮತ್ತು ಬರವಣಿಗೆಯ ಮೂಲಕ ಸಾಧ್ಯವಿರುವುದೆಲ್ಲವನ್ನೂ ಮಾಡಿದರು. ಆದರೆ ಅವರು ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗಿ, ಮಮತಾರ ಘನತೆಗೆ ಕುಂದು ಬರುವಂತೆ ತಾವು ಒಂದೇ ಒಂದು ಶಬ್ದವನ್ನು ಆಡಲಿಲ್ಲ ಎಂದು ಧನಕರ್ ತಿಳಿಸಿದರು. ಮಂಗಳವಾರ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಧನಕರ್ ಮಾತನಾಡಿದರು.