ಹೈದರಾಬಾದ್ :ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಮೊದಲ ಬಡ್ತಿ ನೀಡುವ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಮಾಡಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್ನಲ್ಲಿ 11ನೇ ವರ್ಷದ ವೈದ್ಯಕೀಯ ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಶೇ.60ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಯುವ ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಮೂರರಿಂದ ಐದು ವರ್ಷಗಳ ಸೇವೆ ಅತ್ಯಗತ್ಯ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ವೈದ್ಯರು ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಬೇಕು. ನನ್ನ ಈ ಮಾತು ಅನೇಕರಿಗೆ ಇಷ್ಟವಾಗುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ, ಅದು ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಅತ್ಯಗತ್ಯವೆಂದು ನನಗೆ ಅನಿಸುತ್ತದೆ ಎಂದರು.
ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವನ್ನು ಉಪರಾಷ್ಟ್ರಪತಿ ಒತ್ತಿ ಹೇಳಿದ್ದು, ದೇಶದಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತದಲ್ಲಿನ ಅಂತರವನ್ನು ಕಡಿಮೆ ಮಾಡಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಕಾರ್ಯಕ್ರಮದ ಭಾಷಣದಲ್ಲಿ ಉಲ್ಲೇಖಿಸಿದರು.
ವಿಶ್ವ ಆರೋಗ್ಯ ಸಂಘಟನೆಯ ಮಾರ್ಗಸೂಚಿಯಂತೆ ಒಂದು ಸಾವಿರ ರೋಗಿಗಳಿಗೆ ಓರ್ವ ವೈದ್ಯನಿರಬೇಕು. ಆದರೆ, ಈಗ 1,456 ರೋಗಿಗಳಿಗೆ ಓರ್ವ ವೈದ್ಯನಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. (ದಿ ಪ್ರಿಂಟ್ ವರದಿ ಮಾಡಿರುವಂತೆ ಓರ್ವ ವೈದ್ಯನಿಗೆ 1,511 ಮಂದಿ ರೋಗಿಗಳಿದ್ದಾರೆ).
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಯೋಜನೆಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ವೆಂಕಯ್ಯನಾಯ್ಡು, ನಗರಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಮಂದಿ ವೈದ್ಯರು ಒಲವು ತೋರುತ್ತಿರುವ ನಿಟ್ಟಿನಲ್ಲಿ ನಗರ-ಗ್ರಾಮೀಣ ಭಾಗದಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದಿದ್ದಾರೆ.
ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುತ್ತದೆ: ಮೋದಿ