ಕೊಲ್ಕತ್ತಾ (ಪಶ್ಚಿಮಬಂಗಾಳ) : ಪಶ್ಚಿಮಬಂಗಾಳ ಟಿಎಂಸಿ ಸರ್ಕಾರ ಮತ್ತು ರಾಜ್ಯಪಾಲ ಸಿ.ವಿ ಆನಂದ್ ಬೋಸ್ ನಡುವಿನ ಹಗ್ಗಜಗ್ಗಾಟ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ದೆಹಲಿಯಿಂದ ವಾಪಸ್ ಆಗಿರುವ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ವಿಶ್ವವಿದ್ಯಾನಿಲಯಕ್ಕೆ ನಾನು ನೇಮಿಸಿರುವ ಉಪಕುಲಪತಿಗಳಿಗೆ ಮಮತಾ ನೇತೃತ್ವದ ಸರ್ಕಾರವು ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಐವರು ಉಪಕುಲಪತಿಗಳು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಆರೋಪಗಳ ಸುರಿಮಳೆಗೈದಿರುವ ರಾಜ್ಯಪಾಲರು, ನಾನು ನೇಮಿಸಿರುವ ಎಲ್ಲ ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಬೆದರಿಸುವ ತಂತ್ರವನ್ನು ಪಶ್ಚಿಮಬಂಗಾಳ ಸರ್ಕಾರ ಮಾಡುತ್ತಿದೆ. ಈವರೆಗೆ ಒಟ್ಟು ಐವರು ಉಪಕುಲಪತಿಗಳು ರಾಜೀನಾಮೆ ನೀಡಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ವ್ಯಕ್ತಿಗಳು ಮತ್ತು ಶಿಕ್ಷಣ ತಜ್ಞರು ಬಲವಂತವಾಗಿ ಹುದ್ದೆ ತ್ಯಜಿಸುವಂತೆ ಮಾಡುವುದು ನಮ್ಮ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಹೇಳಿದರು.
ನಾನು ಪಶ್ಚಿಮಬಂಗಾಳದಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡುವ ಇಚ್ಛೆಯಿಂದ ಬಂದಿದ್ದೇನೆ. ಹೊಸ ಪೀಳಿಗೆಯು ನಮ್ಮ ಅತಿದೊಡ್ಡ ಸಂಪನ್ಮೂಲಗಳಲ್ಲಿ ಒಂದು ಎಂದು ಬಲವಾಗಿ ನಂಬುತ್ತೇನೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಆಶಿಸುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದು ಪ್ರಮುಖವಾಗುತ್ತದೆ. ಆದರೆ, ಇಲ್ಲಿನ ವಿದ್ಯಾಲಯಗಳಲ್ಲಿ ಇಂತಹ ವಾತಾವರಣ ಇಲ್ಲ. ಎಲ್ಲಾ ವಿಶ್ವವಿದ್ಯಾನಿಲಯಗಳು ಭ್ರಷ್ಟಾಚಾರ ಮತ್ತು ಹಿಂಸೆ ಮುಕ್ತವಾಗಬೇಕು ಎಂದರು.