ಚಂಡೀಗಢ, ಪಂಜಾಬ್: ತಮಿಳುನಾಡಿನಲ್ಲಿ ‘ಉಪಕುಲಪತಿ ಹುದ್ದೆಯನ್ನು 40-50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ’ ಎಂದು ಪಂಜಾಬ್ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ಶುಕ್ರವಾರ ವಿವಾದಕ್ಕೆ ಎಡೆ ಮಾಡಿಕೊಡುವ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪುರೋಹಿತ್, ಪಂಜಾಬ್‌ನ ವಿಶ್ವವಿದ್ಯಾನಿಲಯಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಉಪಕುಲಪತಿಗಳ ನೇಮಕಾತಿಯಲ್ಲಿ ಅವರ ಪಾತ್ರವಿದೆ. ಪುರೋಹಿತ್ ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಲೂಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಸತ್ಬೀರ್ ಸಿಂಗ್ ಗೋಸಲ್ ತೆಗೆದುಹಾಕಿ ಎಂದು ಹೇಳಿದ್ದರು. ಏಕಂದ್ರೆ ಡಾ ಸತ್ಬೀರ್ ಸಿಂಗ್ರನ್ನು ಕಾನೂನು ಬಾಹಿರವಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಅಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಇತ್ತು:ನಾನು ನಾಲ್ಕು ವರ್ಷಗಳ ಕಾಲ ತಮಿಳುನಾಡು ರಾಜ್ಯಪಾಲನಾಗಿದ್ದೆ. ಅಲ್ಲಿ ತುಂಬಾ ಕೆಟ್ಟ ಪರಿಸ್ಥಿತಿಯಿತ್ತು. ತಮಿಳುನಾಡಿನಲ್ಲಿ ಉಪಕುಲಪತಿ ಹುದ್ದೆಯನ್ನು 40-50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಪುರೋಹಿತ್ ಆರೋಪಿಸಿದ್ದಾರೆ. ನಾನು ತಮಿಳುನಾಡಿನಲ್ಲಿ ರಾಜ್ಯಪಾಲರಾಗಿದ್ದಾಗ ಕಾನೂನಿನ ಪ್ರಕಾರ 27 ವಿಶ್ವವಿದ್ಯಾಲಯಗಳ ವಿಸಿಗಳನ್ನು ನೇಮಿಸಿದೆ. ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ಪಂಜಾಬ್ ಸರ್ಕಾರ ನನ್ನಿಂದ ಕಲಿಯಬೇಕು. ಪಂಜಾಬ್‌ನಲ್ಲಿ ಯಾರು ಸಮರ್ಥರು ಮತ್ತು ಅಸಮರ್ಥರು ಎಂದು ನನಗೆ ತಿಳಿದಿದೆ. ಶಿಕ್ಷಣ ಸುಧಾರಣೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ:ವಿಶ್ವವಿದ್ಯಾಲಯಗಳ ಕೆಲಸದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪಂಜಾಬ್ ಸರ್ಕಾರ ಹೇಳುತ್ತಿದೆ. ವಿಶ್ವವಿದ್ಯಾನಿಲಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಸರ್ಕಾರ ಮೂರು ಬಾರಿ ವಿಸಿ ವಿಸ್ತರಣೆಗೆ ಪತ್ರ ಕಳುಹಿಸಿದೆ ಎಂದು ಹೇಳಿದರು.