ನವದೆಹಲಿ :ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವಂತೆ ವಿಎಚ್‌ಪಿ ಮುಖ್ಯಸ್ಥ ಅಲೋಕ್ ಕುಮಾರ್ ಅವರು ಆರೆಸ್ಸೆಸ್‌ನ ಹಿರಿಯ ನಾಯಕರಾದ ರಾಮಲಾಲ್ ಮತ್ತು ಕೃಷ್ಣ ಗೋಪಾಲ್ ಅವರೊಂದಿಗೆ ದೆಹಲಿಯ ಅಡ್ವಾಣಿಯಲ್ಲಿನ ನಿವಾಸಕ್ಕೆ ಭೇಟಿ ನೀಡಿ ದೇವಾಲಯ ಹಾಗೂ ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ, ಇಬ್ಬರೂ ಹಿರಿಯರಾಗಿದ್ದು ಆರೋಗ್ಯ ಮತ್ತು ವಯಸ್ಸಿನ ದೃಷ್ಟಿಯಿಂದ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿದ್ದು, ಈ ವಿನಂತಿಗೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರ ಮಾಧ್ಯಮದವರಿಗೆ ತಿಳಿಸಿದ್ದರು. ಅವರ ಈ ಹೇಳಿಕೆ ನೀಡಿದ ಮರು ದಿನವೇ ವಿಹೆಚ್ಪಿ ಹಾಗೂ ಆರ್ಎಸ್ಎಸ್ ಇಬ್ಬರೂ ಹಿರಿಯ ನಾಯಕರಿಗೆ ಅಧಿಕೃತ ಆಹ್ವಾನ ನೀಡಿದೆ.
ಅಡ್ವಾಣಿ (96) ಮತ್ತು ಜೋಶಿ (89) ಅವರನ್ನು ದೇವಸ್ಥಾನದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಮತ್ತು ಇಬ್ಬರೂ ಪಾಲ್ಗೊಳ್ಳಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂದು ವಿಎಚ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.
“ಜನವರಿ 22ರ ರಾಮ ಮಂದಿರದ ಪ್ರಾಣ ಪ್ರತಿಷ್ಠಾ (ಪ್ರತಿಷ್ಠಾಪನೆ) ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರಾಮಮಂದಿರ ಚಳವಳಿಯ ಪ್ರವರ್ತಕರಾದ ಅಡ್ವಾಣಿ ಜಿ ಮತ್ತು ಮುರಳಿ ಮನೋಹರ ಜೋಶಿ ಜಿ ಅವರಿಗೆ ಆಹ್ವಾನವನ್ನು ಹಸ್ತಾಂತರಿಸಲಾಗಿದೆ. ಚಳವಳಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಇಬ್ಬರೂ ಹಿರಿಯರು ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು” ಎಂದು ಅಲೋಕ್ ಕುಮಾರ್ ಪರವಾಗಿ ವಿಎಚ್‌ಪಿ ಹೇಳಿಕೆ ತಿಳಿಸಿದೆ.
ಈ ಬಗ್ಗೆ ಅಲೋಕ್ ಕುಮಾರ್ ಅವರು ಮಾತನಾಡಿ, ''ಸೋಮವಾರವೇ ಜೋಶಿ ಅವರಿಗೆ ಆಹ್ವಾನವನ್ನು ಹಸ್ತಾಂತರಿಸಲಾಗಿದೆ. ನಾವು ಇಬ್ಬರು ನಾಯಕರನ್ನು ಆಹ್ವಾನಿಸಿದ್ದೇವೆ. ಅವರು ಹಾಜರಾಗಬೇಕೆಂದು ವಿನಂತಿಸಿದ್ದೇವೆ. ಆದುದರಿಂದಲೇ ಅಡ್ವಾಣಿ ಜಿ ಯವರ ಮನೆಗೆ ಭೇಟಿ ನೀಡಿದಾಗ, ಇಡೀ ಚರ್ಚೆಯು ಅವರ ಭೇಟಿಯನ್ನು ಸಾಧ್ಯವಾಗಿಸುವ ಪ್ರಯತ್ನದ ಮೇಲೆ ಕೇಂದ್ರೀಕೃತವಾಗಿತ್ತು. ಅವರ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗಾಗಿ ಏನು ಬೇಕಾದರೂ ವ್ಯವಸ್ಥೆ ಮಾಡುತ್ತೇವೆ. ಅಲ್ಲದೇ ಕಾರ್ಯಕ್ರಮಕ್ಕೆ ಬರಬೇಕು ಎಂದು ಅವರಿಗೆ ತಿಳಿಸಿದ್ದೇವೆ'' ಎಂದು ಅವರು ಹೇಳಿದರು.
ಆರೋಗ್ಯ ಕಾಳಜಿಯ ಅಭಿವ್ಯಕ್ತಿ:“ಅವರನ್ನು (ಅಡ್ವಾಣಿ ಮತ್ತು ಜೋಶಿ ಅವರನ್ನು ಪವಿತ್ರಾಭಿಷೇಕ ಕಾರ್ಯಕ್ರಮಕ್ಕೆ) ಆಹ್ವಾನಿಸದಿರುವ ಯಾವುದೇ ಯೋಜನೆ ಇರಲಿಲ್ಲ. ಅವರಿಲ್ಲದೇ ರಾಮಮಂದಿರ ಚಳವಳಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಚಂಪತ್ ಜಿ ಅವರ ಹೇಳಿಕೆಗಳು ಅವರ ಆರೋಗ್ಯದ ಕಾಳಜಿಯ ಅಭಿವ್ಯಕ್ತಿ ಮಾತ್ರ. ಅವರಿಗೂ (ರೈ) ಕೂಡಾ ವಯಸ್ಸಾಗಿದೆ'' ಎಂದು ವಿಎಚ್‌ಪಿ ನಾಯಕರೊಬ್ಬರು ಹೇಳಿದ್ದಾರೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಅಡ್ವಾಣಿ ಮತ್ತು ಜೋಶಿ ಅವರ ಉಪಸ್ಥಿತಿ ಅಗತ್ಯವಿದ್ದರೂ, ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಬರದಂತೆ ವಿನಂತಿಸಲಾಗಿದೆ ಎಂದು ರೈ ಸೋಮವಾರ ಹೇಳಿದ್ದರು.
ಇದನ್ನೂ ಓದಿ:ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಪಾಲ್ಗೊಳ್ಳದಂತೆ ಅಡ್ವಾಣಿ, ಜೋಶಿಗೆ ಮನವಿ