ಚೆನ್ನೈ: ಸ್ವಾತಂತ್ರ್ಯ ಹೋರಾಟಗಾರ, ದೇಶದ ಹಿರಿಯ ಕಮ್ಯುನಿಸ್ಟ್ ನಾಯಕ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎನ್. ಶಂಕರಯ್ಯ ಅವರು ನವೆಂಬರ್ 15, 2023 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 101 ನೇ ವಯಸ್ಸಿನಲ್ಲಿ ನಿಧನರಾದರು. ಶಂಕರಯ್ಯ ಕಳೆದ ಒಂದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ನವೆಂಬರ್ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಶಂಕರಯ್ಯನವರು 10 ದಿನಗಳ ಹಿಂದಿನವರೆಗೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ನವೆಂಬರ್ 7 ರಂದು ದಿವಂಗತ ನಾಯಕ ಪಿ. ರಾಮಮೂರ್ತಿ ಅವರ ಪ್ರತಿಮೆ ಅನಾವರಣ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿ ಎಂ.ಆರ್.ವೆಂಕಟರಾಮನ್ ಅವರ ಹೆಸರಿನಲ್ಲಿ ಸಭಾಂಗಣ ಉದ್ಘಾಟಿಸಿದಾಗ ಅವರು ಪಕ್ಷಕ್ಕೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದರು.
ಜುಲೈ 15, 1922 ರಂದು ಜನಿಸಿದ ಶಂಕರಯ್ಯ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) 32 ರಾಷ್ಟ್ರೀಯ ಮಂಡಳಿ ಸದಸ್ಯರಲ್ಲಿ ಒಬ್ಬರಾಗಿದ್ದರು. ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಅವರು ಪಕ್ಷ ತೊರೆದರು. ಇದು 1964 ರಲ್ಲಿ ಸಿಪಿಐ (ಎಂ) ರಚನೆಗೆ ಕಾರಣವಾಯಿತು. ರಾಷ್ಟ್ರೀಯ ಮಂಡಳಿ ಸದಸ್ಯರಲ್ಲಿ ಈಗ ಉಳಿದಿರುವ ಮತ್ತೊಬ್ಬ ಸದಸ್ಯ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಆಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಶಂಕರಯ್ಯ ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
1941ರಲ್ಲಿ ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಂಕರಯ್ಯನವರನ್ನು ಮೊದಲ ಬಾರಿಗೆ ಬಂಧಿಸಲಾಯಿತು. ಆಗ ಮಧುರೈನಲ್ಲಿ ಅಡಗಿಕೊಂಡಿದ್ದ ದಿವಂಗತ ಕಮ್ಯುನಿಸ್ಟ್ ನಾಯಕ ಎ.ಕೆ.ಗೋಪಾಲನ್ ಅವರ ಸೂಚನೆಯ ಮೇರೆಗೆ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬೆಂಬಲಿಸಿ ಅವರು ಪ್ರತಿಭಟನೆ ಆಯೋಜಿಸಿದ್ದರು. ಪೊಲೀಸರು ವಿದ್ಯಾರ್ಥಿ ನಿಲಯದಲ್ಲಿ ಶೋಧ ನಡೆಸಿದಾಗ ಶಂಕರಯ್ಯ ಬರೆದ ಕರಪತ್ರಗಳು ಸಿಕ್ಕ ನಂತರ ಅವರನ್ನು ಬಂಧಿಸಲಾಗಿತ್ತು. ಈ ಘಟನೆಯಿಂದ ಅವರ ಅಧ್ಯಯನ ಮೊಟಕುಗೊಂಡಿತು. ಅಂತಿಮ ಪರೀಕ್ಷೆಗಳಿಗೆ 15 ದಿನಗಳ ಮೊದಲು ಜೈಲಿನಲ್ಲಿದ್ದ ಕಾರಣ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ 18 ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು.