ನವದೆಹಲಿ: ಆಧಾರ್ ಕಾರ್ಡ್ ಸಂಬಂಧ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮಹತ್ವದ ಪ್ರಕಟಣೆ ಹೊರಡಿಸಿದೆ. ಆಧಾರ್ ಕಾರ್ಡ್ ಸ್ವೀಕರಿಸುವ ಸಂಸ್ಥೆಗಳು ಮೊದಲಿಗೆ ಅದರ ನೈಜತೆ ಪರಿಶೀಲಿಸಬೇಕು ಎಂದು ಯುಐಡಿಎಐ ತಿಳಿಸಿದೆ.
ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಕಾರ್ಡ್ ಸ್ವೀಕರಿಸುವ ಮೊದಲು ಪರಿಶೀಲನೆ ಅಗತ್ಯವಾಗಿದೆ. ಆಧಾರ್ ಹೊಂದಿರುವವರ ಒಪ್ಪಿಗೆಯನ್ನು ಅನುಸರಿಸಿ ಆಧಾರ್ ಸಂಖ್ಯೆಯ ಪರಿಶೀಲನೆ ಮಾಡಬೇಕು. ವ್ಯಕ್ತಿಯೊಬ್ಬರು ಪ್ರಸ್ತುತಪಡಿಸಿದ ಆಧಾರ್‌ನ ಯಾವುದೇ ರೂಪದ (ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಮತ್ತು ಎಂ-ಆಧಾರ್) ನೈಜತೆ ಪರಿಶೀಲನೆ ಸರಿಯಾದ ಹೆಜ್ಜೆಯಾಗಿದೆ ಎಂದು ಯುಐಡಿಎಐ ಹೇಳಿದೆ.
ಆಧಾರ್ ಕಾರ್ಡ್ನ ನೈಜತೆ ಪರಿಶೀಲನೆಯಿಂದ ಅಕ್ರಮ ಬಳಕೆ ಮತ್ತು ಯಾವುದೇ ಸಂಭವನೀಯ ದುರುಪಯೋಗದಲ್ಲಿ ತೊಡಗುವುದರಿಂದ ಸಮಾಜ ವಿರೋಧಿ ಶಕ್ತಿಗಳಿಗೆ ಕಡಿವಾಣವಾಗಲಿದೆ. ಅಲ್ಲದೇ, ಇದು ಬಳಕೆಯ ಉಪಯುಕ್ತತೆ ಉತ್ತೇಜಿಸುತ್ತದೆ ಮತ್ತು ಯಾವುದೇ 12 ಅಂಕಿಯ ಸಂಖ್ಯೆಯು ಕಾರ್ಡ್ ಆಧಾರ್ ಆಗಿರುವುದಿಲ್ಲ ಎಂದು ಸಲಹೆ ನೀಡಿದೆ.
ಆಧಾರ್ ದಾಖಲೆಗಳ ಟ್ಯಾಂಪರಿಂಗ್ ಶಿಕ್ಷಾರ್ಹ ಅಪರಾಧ: ಆಫ್‌ಲೈನ್ ಪರಿಶೀಲನೆಯ ಮೂಲಕ ಆಧಾರ್ ದಾಖಲೆಗಳ ತಿರುಚುವುದನ್ನು (ಟ್ಯಾಂಪರಿಂಗ್) ಕಂಡು ಹಿಡಿಯಬಹುದು. ಆಧಾರ್ ಟ್ಯಾಂಪರಿಂಗ್ ಶಿಕ್ಷಾರ್ಹ ಅಪರಾಧವಾಗಿದ್ದು, ಆಧಾರ್ ಕಾಯಿದೆಯ ಸೆಕ್ಷನ್ 35ರ ಅಡಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಯುಐಡಿಎಐ ಹೇಳಿದೆ. ಇದೇ ವೇಳೆ, ಆಧಾರ್ ಕಾರ್ಡ್ ಬಳಕೆಗೆ ಮೊದಲು ಪರಿಶೀಲನೆಯ ಅಗತ್ಯ ಒತ್ತಿಹೇಳುವ ಮೂಲಕ ಯುಐಡಿಎಐ, ಈ ಸಂಬಂಧ ಅಗತ್ಯ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಆಧಾರ್ ಕಳೆದುಕೊಂಡಿದ್ದ ಹುಬ್ಬಳ್ಳಿಯ ಯುವಕ.. ಶಂಕಿತನ ಕೈಗೆ ಸಿಕ್ಕು ದುರುಪಯೋಗ: ಪೋಷಕರ ಸ್ಪಷ್ಟನೆ
ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಸಲ್ಲಿಸಿದಾಗಲೆಲ್ಲ, ಆಧಾರ್‌ನ ಗುರುತಿನ ದಾಖಲೆಯಾಗಿ ಬಳಸಿಕೊಂಡು ಸಂಬಂಧಪಟ್ಟ ಘಟಕದಿಂದ ನಿವಾಸಿಯನ್ನಾಗಿ ಪರಿಗಣಿಸಲಾಗುತ್ತದೆ ಎಂದಿರುವ ಯುಐಡಿಎಐ, ಈ ಘಟಕಗಳನ್ನು ಉದ್ದೇಶಿಸಿ ಸುತ್ತೋಲೆ ಹೊರಡಿಸಿದೆ. ಆಧಾರ್ ಪರಿಶೀಲನೆ ಮಾಡಲು ಅಧಿಕಾರ ಮತ್ತು ಪರಿಶೀಲನೆಯ ಅಗತ್ಯ ಹಾಗೂ ಅನುಸರಿಸಬೇಕಾದ ನಿಯಮಗಳ ಬಗ್ಗೆಯೂ ಯುಐಡಿಎಐ ತಿಳಿಸಿದೆ.
ಕ್ಯೂಆರ್ ಕೋಡ್ ಬಳಸಿ ಆಧಾರ್ ಪರಿಶೀಲಿಸಿ: ಯಾವುದೇ ಆಧಾರ್ ಅನ್ನು ಕ್ಯೂಆರ್ ಕೋಡ್ ಬಳಸಿಕೊಂಡು ಪರಿಶೀಲಿಸಬಹುದು. ಆಧಾರ್ ಪತ್ರ (Aadhaar letter), ಇ-ಆಧಾರ್ (e-Aadhaar), ಆಧಾರ್ ಪಿವಿಸಿ ಕಾರ್ಡ್ (Aadhaar PVC card) ಮತ್ತು ಎಂ - ಆಧಾರ್ (m-Aadhaar) ಸೇರಿ ಎಲ್ಲ ಪ್ರಕಾರದ ಆಧಾರ್ ಕಾರ್ಡ್ ಅನ್ನೂ ಎಂಆಧಾರ್ ಅಪ್ಲಿಕೇಶನ್ (mAadhaar App) ಅಥವಾ ಆಧಾರ್ ಕ್ಯೂಆರ್ ಕೋಡ್ ಸ್ಕ್ಯಾನರ್ (Aadhaar QR code Scanner) ಬಳಸಿಕೊಂಡು ಪರಿಶೀಲನೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದೆ.
ಕ್ಯೂಆರ್ ಕೋಡ್ ಸ್ಕ್ಯಾನರ್ ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಮೊಬೈಲ್ ಫೋನ್‌ಗಳು ಮತ್ತು ವಿಂಡೋ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಉಚಿತವಾಗಿ ಲಭ್ಯವಿದೆ. ನಿವಾಸಿಗಳು ತಮ್ಮ ಆಧಾರ್ ಅನ್ನು ಕಾಗದ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ತಮ್ಮ ಗುರುತು ಸ್ಥಾಪಿಸಲು ಆಧಾರ್ ಸಂಖ್ಯೆಯನ್ನು ಸ್ವಯಂ ಪ್ರೇರಣೆಯಿಂದ ಬಳಸಬಹುದು ಎಂದು ಯುಐಡಿಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಕಲಿ ಆಧಾರ್ ನೀಡಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ ಶಂಕಿತ: ಮೊಬೈಲ್ ಅಂಗಡಿ ಮಾಲೀಕರ ಸಂದರ್ಶನ