ಹೈದರಾಬಾದ್ (ತೆಲಂಗಾಣ): ಕೋವಿಡ್ ರೋಗದ ಎರಡನೇ ತರಂಗವು ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಆಮ್ಲಜನಕ ಮತ್ತು ಔಷಧಿಗಳ ಕೊರತೆ ಎದುರಾಗಿ ಜನರು ಸಾವು- ಬದುಕಿನ ನಡುವೆ ನರಳಾಡುತ್ತಿದ್ದಾರೆ. ಸದ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ವೆಂಟಿಲೇಟರ್ನಲ್ಲಿದೆ ಎಂಬಂತೆ ಭಾಸವಾಗುತ್ತಿದೆ. ದೇಶಕ್ಕೆ ಬೇಕಾದ ವೈದ್ಯಕೀಯ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿರುವುದು ಇದಕ್ಕೆ ಕಾರಣ. ಇಂಥ ಪರಿಸ್ಥಿತಿಯಲ್ಲೂ ದೇಶ ಮಾರಕ ರೋಗದ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸಿದೆೆ.
ಪಿಎಂ ಕೇರ್ಸ್ ಫಂಡ್‌ನಿಂದ ಕೇಂದ್ರ ರಾಜ್ಯಗಳಿಗೆ ವೆಂಟಿಲೇಟರ್‌ಗಳನ್ನು ನೀಡಿದೆ. ಆದರೆ ಅನೇಕ ರಾಜ್ಯಗಳಲ್ಲಿ ಈ ವ್ಯವಸ್ಥೆ ಇನ್ನು ಲಭ್ಯವಾಗಿಲ್ಲ. ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳ ಸ್ಥಿತಿ ತುಂಬಾ ಅಸಹ್ಯಕರವಾಗಿದ್ದು, ನಿಧಿಯಿಂದ ನೀಡಲಾದ ವೆಂಟಿಲೇಟರ್‌ಗಳನ್ನು ನಿರ್ವಹಿಸಲು ಯಾವುದೇ ತಂತ್ರಜ್ಞರಿಲ್ಲದ ಪರಿಸ್ಥಿತಿ ಇದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೋವಿಡ್ ಕಾರಣದಿಂದಾಗಿ ದೇಶಾದ್ಯಂತ ಪ್ರತಿದಿನ ಸರಾಸರಿ 3800 ರಿಂದ 4000 ಜನರು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರಿಗೆ ವೆಂಟಿಲೇಟರ್‌ಗಳನ್ನು ಲಭ್ಯವಾಗುವಂತೆ ಮಾಡಿ ಎಂದು ಆಡಳಿತವನ್ನು ಪರಿಪರಿಯಾಗಿ ಕೋರುತ್ತಿದ್ದಾರೆ. ವೆಂಟಿಲೇಟರ್‌ಗಳು ಲಭ್ಯವಿಲ್ಲದ ಕಾರಣ ಅನೇಕ ಜೀವಗಳು ಬಲಿಯಾಗುತ್ತಿವೆ.
ಬಿಹಾರ: ಕಳೆದ ವರ್ಷ ಪಿಎಂ ಕೇರ್ಸ್ ನಿಧಿಯಿಂದ ರಾಜ್ಯವು 30 ವೆಂಟಿಲೇಟರ್‌ಗಳನ್ನು ಪಡೆದುಕೊಂಡಿತ್ತು. ಆದರೆ ಒಂದೇ ಒಂದನ್ನೂ ಸಹ ಬಳಕೆ ಮಾಡಿಲ್ಲ. ಕಾರಣ ರಾಜ್ಯದಲ್ಲಿರುವ ತಂತ್ರಜ್ಞರ ಕೊರತೆ. ಪ್ರಸ್ತುತ ತಂತ್ರಜ್ಞರ ಕೊರತೆಯಿಂದಾಗಿ ಇಡೀ ರಾಜ್ಯದಲ್ಲಿ 207 ವೆಂಟಿಲೇಟರ್‌ಗಳು ಉಪಯೋಗವಾಗದೆ ಉಳಿದಿದೆ ಎಂಬ ಅಂಶದಿಂದ ಬಿಹಾರದ ಕರುಣಾಜನಕ ಪರಿಸ್ಥಿತಿಯನ್ನು ಅಳೆಯಬಹುದು.
ಪಂಜಾಬ್:ಪಿಎಂ ಕೇರ್ಸ್ ನಿಧಿಯಿಂದ ಪಂಜಾಬ್ 809 ವೆಂಟಿಲೇಟರ್‌ಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 558 ವೆಂಟಿಲೇಟರ್‌ಗಳು ಮಾತ್ರ ಬಳಕೆಯಲ್ಲಿವೆ. 251 ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಹಾಗೆಯೇ ಬಿದ್ದಿವೆ. ಸರ್ಕಾರದ ಪ್ರಕಾರ, ವೆಂಟಿಲೇಟರ್‌ಗಳನ್ನು ಅಳವಡಿಸಲು ಪಂಜಾಬ್‌ನಲ್ಲಿ ಒಬ್ಬ ಎಂಜಿನಿಯರ್ ಮಾತ್ರ ನಿಯೋಜನೆಯಾಗಿದ್ದಾರೆ.
ಕರ್ನಾಟಕ:ಕರ್ನಾಟಕವು 3025 ವೆಂಟಿಲೇಟರ್‌ಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 1,859 ವೆಂಟಿಲೇಟರ್‌ಗಳನ್ನು ಮಾತ್ರ ಬಳಸಲಾಗುತ್ತಿದೆ. ಉಳಿದ 1,166 ವೆಂಟಿಲೇಟರ್‌ಗಳು ನಿಷ್ಫಲವಾಗಿದೆ. ಪ್ರಸ್ತುತ ನೀಡಲಾದ ಸುಮಾರು 40 ಪ್ರತಿಶತದಷ್ಟು ವೆಂಟಿಲೇಟರ್‌ಗಳು ಧೂಳು ಹಿಡಿಯುತ್ತಿದೆ. ಇದಕ್ಕೂ ಸಹ ತಾಂತ್ರಿಕ ಸಮಸ್ಯೆಗಳೇ ಕಾರಣ ಎಂದು ಹೇಳಲಾಗುತ್ತಿದೆ.