ವೆಲ್ಲೂರು(ತಮಿಳುನಾಡು):ಸಿನಿಮಾ ನೋಡಿ ತಡರಾತ್ರಿ ಆಸ್ಪತ್ರೆಗೆ ಮರಳುತ್ತಿದ್ದಾಗ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪ್ರಕರಣದಲ್ಲಿ ಐವರು ದುಷ್ಕರ್ಮಿಗಳು ಭಾಗಿಯಾಗಿದ್ದು, ಈಗಾಗಲೇ ನಾಲ್ವರು ಬಾಲಾಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರ್ಚ್ 17ರಂದು ವೆಲ್ಲೂರು ಜಿಲ್ಲೆಯ ಕಟ್ಪಾಡಿಯಲ್ಲಿ ಶೇರ್ ಆಟೋದಲ್ಲಿ ತೆರಳುತ್ತಿದ್ದಾಗ ವಿದ್ಯಾರ್ಥಿನಿಯನ್ನು ಅಪಹರಿಸಲಾಗಿತ್ತು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮಾರ್ಚ್ 21ರ ರಾತ್ರಿ ವೆಲ್ಲೂರು ಜಿಲ್ಲಾಧಿಕಾರಿ ಕಚೇರಿ ಎದುರು ಇಬ್ಬರು ವ್ಯಕ್ತಿಗಳು ಪರಸ್ಪರ ಕಿತ್ತಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ಬಂಧನಕ್ಕೊಳಪಡಿಸಿ, ವಿಚಾರಣೆಗೊಳಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾರ್ಚ್ 17ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಯುವತಿ ಹಾಗೂ ಆಕೆಯ ಸ್ನೇಹಿತ ಆಟೋರಿಕ್ಷಾ ಹತ್ತಿದ್ದಾರೆ. ಆಟೋ ರಿಕ್ಷಾದಲ್ಲಿ ಆಗಲೇ ಐವರು ಕುಳಿತಿದ್ದರು. ಈ ಸಂದರ್ಭದಲ್ಲಿ ಯುವಕ ಹಾಗು ಯುವತಿಯನ್ನು ಆಸ್ಪತ್ರೆಗೆ ಬಿಡುವ ಬದಲಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬೆದರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತದನಂತರ ಅವರ ಬಳಿಯಿದ್ದ ಮೊಬೈಲ್, 40 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಇದನ್ನೂ ಓದಿ:'ಹೆಬ್ಬೆಟ್ಟು' ನೀಡುವ ಮುನ್ನ ಎಚ್ಚರ! ವೃದ್ಧೆಯ ಆಸ್ತಿ ಕಬಳಿಸಿದ ಸ್ವಯಂಸೇವಕ
ಮಾರ್ಚ್ 21ರಂದು ಜಿಲ್ಲಾಧಿಕಾರಿ ಕಚೇರಿ ಎದುರು ದೋಚಿರುವ ಹಣಕ್ಕಾಗಿ ಜಗಳವಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲು ಸಂತ್ರಸ್ತೆ ಹಿಂದೇಟು ಹಾಕಿದ್ದಾಗಿ ಪೊಲೀಸರು ತಿಳಿಸಿದ್ದು, ಮಾರ್ಚ್ 22ರಂದು ವೆಲ್ಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಮೇಲ್ ಮಾಡಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಐವರ ಪೈಕಿ ನಾಲ್ವರು ಬಾಲಾಪರಾಧಿಗಳು ಎಂದು ತಿಳಿದು ಬಂದಿದ್ದು, ಮತ್ತೋರ್ವನಿಗಾಗಿ ಶೋಧಕಾರ್ಯ ಮುಂದುವರೆದಿದೆ.