ವೆಲ್ಲೂರು (ತಮಿಳುನಾಡು):ತಿರುಪತ್ತೂರು ಜಿಲ್ಲೆಯ ವಾಣಿಯಂಪಾಡಿ ಪಕ್ಕದ ಉದಯೇಂದ್ರಂ ಗ್ರಾಮದ ಟ್ರಕ್ ಚಾಲಕ ಕಾರ್ತಿಕೇಯನ್ (45) ಅವರು ನಿನ್ನೆ (ಜೂನ್ 5) ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಮಾದನೂರು ಬಳಿ ಲಾರಿ ಚಲಾಯಿಸಿಕೊಂಡು ಬರುತ್ತಿದ್ದಾಗ ಹಿಂಭಾಗದಿಂದ ಬರುತ್ತಿದ್ದ ಖಾಸಗಿ ಬಸ್ ಅನಿರೀಕ್ಷಿತವಾಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಪಲ್ಟಿಯಾಗಿದೆ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಚಾಲಕ ಕಾರ್ತಿಕೇಯನ್ ಅವರನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂದು ತಲೆಯ ಗಾಯಕ್ಕೆ ಹೊಲಿಗೆ ಹಾಕಿದರೂ ರಕ್ತಸ್ರಾವ ನಿಲ್ಲಲಿಲ್ಲ. ಅಲ್ಲದೇ ತೀವ್ರ ತಲೆನೋವು ಕೂಡಾ ಕಾಣಿಸಿಕೊಂಡಿದೆ.
ಸ್ಕ್ಯಾನ್ ವರದಿ- ಆಘಾತಕಾರಿ ಅಂಶ ಬಯಲು:ಇದರಿಂದ ಕಾರ್ತಿಕೇಯನ್ ಸಂಬಂಧಿಕರು ಅವರನ್ನು ಅಲ್ಲಿಂದ ಡಿಸ್ಚಾರ್ಜ್ ಮಾಡಿ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರ ತಲೆಯನ್ನು ಸ್ಕ್ಯಾನ್ ಮಾಡಿದ ವೈದ್ಯರು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಕಾರ್ತಿಕೇಯನ್ ತಲೆಗೆ ಹೊಲಿಗೆ ಹಾಕಿದ ಜಾಗದಲ್ಲಿ ಕಬ್ಬಿಣದ ‘ನಟ್’ ಇರುವುದು ಸ್ಕ್ಯಾನ್ ವರದಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ.
ಆ ಬಳಿಕ ಕಾರ್ತಿಕೇಯನ್ ಅವರ ತಲೆಗೆ ಹಾಕಿದ್ದ ಹೊಲಿಗೆ ಬಿಚ್ಚಿದ ಖಾಸಗಿ ಆಸ್ಪತ್ರೆಯ ವೈದ್ಯರು, ಕಬ್ಬಿಣದ ನಟ್ ಅನ್ನು ಹೊರತೆಗೆದಿದ್ದಾರೆ. ಸೋಂಕು ತಗುಲಿದ ಕಾರಣ 2 ದಿನಗಳ ನಂತರ ಮತ್ತೆ ಹೊಲಿಗೆ ಹಾಕಲು ಸಾಧ್ಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.