ಕರ್ನಾಟಕ

karnataka

ETV Bharat / bharat

ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ! - mother carried the dead body for 10 km

ಸಮಾಜದಲ್ಲಿನ ಕೆಲವು ಘಟನೆಗಳು ಹೃದಯ ಹಿಂಡುತ್ತವೆ. ಇಂಥದ್ದೊಂದು ಘಟನೆ ತಮಿಳುನಾಡಿನಲ್ಲಿ ನಡೆಯಿತು.

ತಮಿಳುನಾಡಿನಲ್ಲಿ ಹಾವು ಕಚ್ಚಿ ಮಗು ಸಾವು
ತಮಿಳುನಾಡಿನಲ್ಲಿ ಹಾವು ಕಚ್ಚಿ ಮಗು ಸಾವು

By

Published : May 30, 2023, 10:19 AM IST

ವೆಲ್ಲೂರು (ತಮಿಳುನಾಡು):ಆಧುನಿಕತೆ ಎಷ್ಟೇ ಬೆಳೆದರೂ ದೇಶದ ಕೆಲವು ಭಾಗಗಳು ಇನ್ನೂ ಅಂಧಃಕಾರದಲ್ಲೇ ಇವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಒಂದೂವರೆ ವರ್ಷದ ಎಳೆ ಕಂದಮ್ಮನಿಗೆ ಹಾವು ಕಚ್ಚಿತ್ತು. ದೂರದ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ಯುವಷ್ಟರಲ್ಲಿ ವಿಷ ದೇಹಪೂರ್ತಿ ಆವರಿಸಿ ಸಾವನ್ನಪ್ಪಿದೆ. ಇಷ್ಟಲ್ಲದೇ, ಅಂತ್ಯಸಂಸ್ಕಾರಕ್ಕೆಂದು ಮಗುವನ್ನು ಆಂಬ್ಯುಲೆನ್ಸ್​ನಲ್ಲಿ ವಾಪಸ್​ ಕರೆ ತರುತ್ತಿದ್ದಾಗ ಅದು ಕೆಟ್ಟು ನಿಂತಿದೆ. 10 ಕಿಮೀ ದೂರ ಮಗುವಿನ ಶವವನ್ನು ಹೆತ್ತಮ್ಮ ಆಕೆಯ ಹೆಗಲ ಮೇಲೆ ಹೊತ್ತುಕೊಂಡೇ ತಂದು ವಿಧಿ ವಿಧಾನ ಮುಗಿಸಿದರು.

ಇಂಥದ್ದೊಂದು ಕರುಳು ಹಿಂಡುವ ಘಟನೆ ನಡೆದಿದ್ದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಲ್ಲೇರಿ ಎಂಬ ಗ್ರಾಮದಲ್ಲಿ. ಇಷ್ಟೆಲ್ಲಾ ಅನಾಹುತಕ್ಕೆ ಪ್ರಮುಖ ಕಾರಣ ಆ ಊರಿಗೆ ರಸ್ತೆ ಇಲ್ಲದೇ ಇರುವುದು. ಅನಾಹುತ ನಡೆದರೂ ಅಲ್ಲಿನ ಜಿಲ್ಲಾಧಿಕಾರಿ ಮಾತ್ರ ಇದೊಂದು ಸಹಜ ಘಟನೆ ಎಂಬಂತೆ ವರ್ತಿಸಿದ್ದಾರೆ. ಗ್ರಾಮಕ್ಕೆ ವೈದ್ಯರನ್ನು ನೇಮಿಸಲಾಗಿದೆ. ಆದರೆ, ಅವರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ. ಊರಿಗೊಂದು ಉತ್ತಮ ರಸ್ತೆ ಹಾಕಿಸುವ ಬಗ್ಗೆ ಮಾತ್ರ ಉಸಿರೆತ್ತಿಲ್ಲ.

ಘಟನೆಯ ಸಂಪೂರ್ಣ ವಿವರ:ಮೇ 26 ರಂದು ಈ ವಿದ್ಯಮಾನ ಘಟಿಸಿದೆ. ಮನೆಯ ಹೊರಗೆ ಮಲಗಿದ್ದ ಒಂದೂವರೆ ವರ್ಷದ ಮಗುವಿಗೆ ಹಾವು ಕಚ್ಚಿದೆ. ವಿಷಯ ತಿಳಿದ ಪೋಷಕರು ಮಗುವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಊರಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ಬಹಳ ಸಮಯ ಹಿಡಿಯಿತು. ಇದರಿಂದ ವಿಷ ಮಗುವಿನ ದೇಹವೆಲ್ಲ ಆವರಿಸಿದೆ. ತಡವಾದ್ದರಿಂದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ನಂತರ ಅಂತ್ಯಕ್ರಿಯೆಗಾಗಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮಗುವನ್ನು ಕಳೆದುಕೊಂಡ ಶೋಕದಲ್ಲಿಯೇ ಆಂಬ್ಯುಲೆನ್ಸ್‌ನಲ್ಲಿ ವಾಪಸ್​ ಕರೆತರಲಾಗುತ್ತಿತ್ತು. ವೆಲ್ಲೂರಿನಿಂದ ಬರುತ್ತಿದ್ದಾಗ ಹದಗೆಟ್ಟ ರಸ್ತೆಯಿಂದಾಗಿ ಆಂಬ್ಯುಲೆನ್ಸ್ ಅರ್ಧದಾರಿಯಲ್ಲೇ ಕೆಟ್ಟು ನಿಂತಿದೆ. ಮುಂದೆ ಸಾಗಲು ಸಾಧ್ಯವಿಲ್ಲ ಎಂದಾದಾಗ ಮಗುವಿನ ತಾಯಿ ಶವವನ್ನು ಹೆಗಲ ಮೇಲೇ ಹೊತ್ತುಕೊಂಡು 10 ಕಿ.ಮೀ ದೂರ ನಡೆದುಕೊಂಡೇ ಕ್ರಮಿಸಿ ಗ್ರಾಮಕ್ಕೆ ಬಂದರು. ಈ ಘಟನೆ ತಮಿಳುನಾಡಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.

ಬಿಜೆಪಿ ಟೀಕೆ:ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಘಟನೆಯನ್ನು ಟೀಕಿಸಿ ಟ್ವೀಟ್​ ಮಾಡಿದ್ದಾರೆ. ಅಲ್ಲೇರಿ ಗುಡ್ಡದ ಗ್ರಾಮದಲ್ಲಿ ಹಾವು ಕಡಿತದಿಂದ ಮಗು ಸಾವನ್ನಪ್ಪಿದ್ದಕ್ಕೆ ತಮಿಳುನಾಡು ಸರ್ಕಾರವೇ ಕಾರಣ. ಕೇಂದ್ರ ಸರ್ಕಾರವು ಚಿಕ್ಕ ಮತ್ತು ಕಡಿದಾದ ಸ್ಥಳದಲ್ಲಿರುವ ಗ್ರಾಮಗಳಿಗೆ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಮೊತ್ತವನ್ನು ಮಂಜೂರು ಮಾಡುತ್ತಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ (ಪಿಎಂಜಿಎಸ್‌ವೈ) ವೆಲ್ಲೂರಿನ ಗ್ರಾಮಗಳಿಗೆ ರಸ್ತೆ ಮಾಡಲು ಏಕೆ ಸಾಧ್ಯವಾಗಿಲ್ಲ?. ಹಳ್ಳಿಗಳಿಗೆ ರಸ್ತೆಗಳನ್ನು ನಿರ್ಮಿಸದಿದ್ದರೆ, ಇಷ್ಟು ವರ್ಷ ಮಂಜೂರಾದ ಹಣ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

ಇತ್ತ ವೆಲ್ಲೂರು ಜಿಲ್ಲಾಧಿಕಾರಿ ಅಲ್ಲೇರಿ ಗುಡ್ಡಗಾಡು ಗ್ರಾಮಕ್ಕೆ ಭೇಟಿ ನೀಡಿ, ಹಾವು ಕಡಿತದಿಂದ ಮೃತಪಟ್ಟ ಮಗುವಿನ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಆರೋಗ್ಯ ಶುಶ್ರೂಷಕಿಯನ್ನು ನೇಮಿಸಲಾಗಿದೆ. ಅವರ ಸಂಪರ್ಕ ಸಂಖ್ಯೆಗಳನ್ನು ಸಹ ಜನರಿಗೆ ಒದಗಿಸಲಾಗಿದೆ. ಆದರೆ, ಮಗುವಿಗೆ ಹಾವು ಕಚ್ಚಿದ್ದರಿಂದ ಆತಂಕಗೊಂಡ ಪೋಷಕರು ಗ್ರಾಮದ ಆರೋಗ್ಯ ಶುಶ್ರೂಷಕರನ್ನು ಸಂಪರ್ಕಿಸದೆ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕದ ಫಿಲಡೆಲ್ಫಿಯಾದಲ್ಲಿ ಗುಂಡಿನ ದಾಳಿ; ಕೇರಳ ಮೂಲದ ವಿದ್ಯಾರ್ಥಿ ಹತ್ಯೆ

ABOUT THE AUTHOR

...view details