ನೈನಿತಾಲ್(ಉತ್ತರಾಖಂಡ): ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳಾ ಪ್ರವಾಸಿಗರು ಮೃತಪಟ್ಟಿರುವ ಘಟನೆ ನೈನಿತಾಲ್‌ನ ಘಾಟ್‌ಗಢ ಬಳಿ ನಡೆದಿದೆ. ಘಟನೆ ಹಲವು ಪ್ರವಾಸಿಗರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ನೋಯ್ಡಾದಿಂದ ನೈನಿತಾಲ್‌ಗೆ ಆಗಮಿಸಿದ್ದ ಪ್ರವಾಸಿ ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ಘಾಟ್‌ಗಢದ ಬಳಿ ಆಳವಾದ ಕಂದಕಕ್ಕೆ ಬಿದ್ದಿದೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಕಂದಕ್ಕೆ ಇಳಿದು ಗಾಯಾಳುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ನಂತರ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಕಂದಕದಿಂದ ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಕೆಲವರು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಇನ್ನು ಕೆಲವರನ್ನು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಈ ಕುರಿತು ಔಟ್ ಪೋಸ್ಟ್ ಇನ್‌ಚಾರ್ಜ್ ನಂದನ್ ಸಿಂಗ್ ರಾವತ್ ಪ್ರತಿಕ್ರಿಯಿಸಿ, "ನೊಯ್ಡಾದಿಂದ 22 ಮಂದಿ ಪ್ರವಾಸಿಗರು ಶನಿವಾರ ಸಂಜೆ ನೈನಿತಾಲ್‌ಗೆ ಭೇಟಿ ನೀಡಿ ಮತ್ತೆ ನೋಯ್ಡಾಗೆ ಹಿಂತಿರುಗುತ್ತಿದ್ದರು. ಇದೇ ವೇಳೆ ಅವರ ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ಕಂದಕ್ಕೆ ಉರುಳಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಮಹಿಳಾ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದರು.