ಅಕೋಲ (ಮಹಾರಾಷ್ಟ್ರ):ಸ್ವಾತಂತ್ರ್ಯವೀರ ಸಾವರ್ಕರ್ ವಿರುದ್ಧ ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕಿ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಜವಾಹರ್ಲಾಲ್ ಅವರಂತಹ ನಾಯಕರಿಗೆ ದ್ರೋಹ ಬಗೆದರು ಎಂದು ಆರೋಪಿಸಿದ್ದಾರೆ. ಇದರ ವಿರುದ್ಧ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ದೂರು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಪಾದಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸಾವರ್ಕರ್ ಬಗ್ಗೆ ಮಾಜಿ ಸಿಎಂ, ಶಿವಸೇನೆಯ ಉದ್ಧವ್ ಠಾಕ್ರೆ ಹೊಂದಿರುವ ನಿಲುವನ್ನು ಟೀಕಿಸಿದ್ದರು. ಈ ವೇಳೆ, ಪತ್ರವೊಂದನ್ನು ಪ್ರದರ್ಶಿಸಿ ಇದು ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆಯಾಚಿಸಿದ ಪತ್ರ ಎಂದು ತೋರಿಸಿದರು.
ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರದಲ್ಲಿ "ನಿಮ್ಮ ಅತ್ಯಂತ ವಿಧೇಯ ಸೇವಕರಾಗಿ ಉಳಿಯಲು ನಾನು ಬೇಡಿಕೊಳ್ಳುತ್ತೇನೆ" ಎಂದು ಬರೆದು ಸಹಿ ಹಾಕಿದ್ದರು. ಬ್ರಿಟಿಷರಿಗೆ ಹೆದರಿದ ಸಾವರ್ಕರ್ ಅವರು ಈ ಪತ್ರ ಬರೆದಿದ್ದರು. ಇದು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಚಳವಳಿಗಾರರಿಗೆ ಮೋಸ ಮಾಡಿದರು ಎಂದು ಹೇಳಿದರು.