ಬೆಂಗಳೂರು:ತಮಿಳುನಾಡಿನ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಪವಾಡ ಸದೃಶ ರೀತಿ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದು, ಅವರಿಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಕಮಾಂಡೋ ಚಿಕಿತ್ಸೆ ನೀಡಲಾಗ್ತಿದ್ದು, ಅವರ ಆರೋಗ್ಯದ ಸ್ಥಿತಿ ಗತಿ ಬಗ್ಗೆ ವರುಣ್ ಸಿಂಗ್ ಅವರ ತಂದೆ ನಿವೃತ್ತ ಕರ್ನಲ್ ಕೆಪಿ ಸಿಂಗ್ ಮಾತನಾಡಿದ್ದಾರೆ. ಪಿಟಿಐ ಜೊತೆ ಮಾಹಿತಿ ಹಂಚಿಕೊಂಡಿರುವ ಅವರು, ಮಗನ ಆರೋಗ್ಯದಲ್ಲಿ ಅನೇಕ ರೀತಿಯ ಏರಿಳಿತಗಳು ಕಂಡು ಬರುತ್ತಿವೆ. ಪ್ರತಿ ಗಂಟೆಗೂ ವರುಣ್ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದು, ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ನುರಿತ ತಜ್ಞ ವೈದ್ಯರಿಂದ ತಪಾಸಣೆ ನಡೆದಿದೆ ಎಂದಿದ್ದಾರೆ.
ಮಗನ ಆರೋಗ್ಯದ ಬಗ್ಗೆ ಇಡೀ ದೇಶದ ಪಾರ್ಥನೆ ಇದೆ. ಅನೇಕರು ವರುಣ್ ಆರೋಗ್ಯ ವಿಚಾರಿಸಲು ಬರುತ್ತಿದ್ದಾರೆ. ಆತನಿಗೆ ಸಿಕ್ಕಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದರು. ಖಂಡಿತವಾಗಲೂ ಆತ ವಿಜಯಶಾಲಿ ಆಗಿ ಹೊರಬರುತ್ತಾನೆ. ಆತನೊಬ್ಬ ಹೋರಾಟಗಾರ ಎಂದು ತಿಳಿಸಿದ್ದಾರೆ.