ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪಿಲಿಭಿತ್ ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪಿಲಿಭಿತ್ ಮತ್ತು ರಾಯ್‌ಬರೇಲಿಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಆಡಳಿತ ಪಕ್ಷದ ಸಂಸದರೇ ತಮ್ಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಮೇಲಿನ ದೌರ್ಜನ್ಯ ಮತ್ತು ಭ್ರಷ್ಟಾಚಾರದ ಪ್ರಕರಣಗಳು ಮುನ್ನೆಲೆಗೆ ಬಂದರೆ, ನಾನು ಸರ್ಕಾರಕ್ಕೆ ಮನವಿ ಮಾಡುವುದಿಲ್ಲ. ಆದರೆ, ನೇರವಾಗಿ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಶುಕ್ರವಾರ ವರುಣ್ ಗಾಂಧಿ ಹೇಳಿದ್ದಾರೆ.
ತಮ್ಮ ಟ್ವಿಟರ್‌ನಲ್ಲಿ ಸಂದೇಶದ ಜೊತೆಗೆ, ವರುಣ್ ಅವರು ಸರ್ಕಾರಿ ಅಧಿಕಾರಿಯೊಂದಿಗೆ ರೈತರ ಸಮಸ್ಯೆ ಚರ್ಚಿಸುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಇನ್ನು ರೈತರು ತಮ್ಮ ಬೆಳೆಗಳಿಗೆ ಬೆಂಕಿ ಹಚ್ಚಿರುವ ಘಟನೆಯನ್ನು ಕಡೆಗಣಿಸುವಂತಿಲ್ಲ ಎಂದಿದ್ದಾರೆ.
ಈ ವೇಳೆ ಅಧಿಕಾರಿಗೆ ಛೀಮಾರಿ ಹಾಕಿದ ಅವರು, ರೈತರು ಈಗಾಗಲೇ ಸಂಕಷ್ಟದಲ್ಲಿದ್ದು, ಈಗ ಅವರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ರಾಜ್ಯದ 17 ಜಿಲ್ಲೆಗಳಲ್ಲಿ ಇದುವರೆಗೆ ರೈತರ ಬೆಳೆ ಹಾನಿಯಾದ ಘಟನೆ ವರದಿಯಾಗಿದೆ. ಈ ಘಟನೆಯು ಮೊದಲು ಲಖೀಂಪುರ ಖೇರಿಯಲ್ಲಿ ಮತ್ತು ನಂತರ ಪಿಲಿಭಿತ್‌ನಲ್ಲಿ ಕಂಡು ಬಂದಿದೆ. ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ತಮ್ಮ ದಲ್ಲಾಳಿಗಳ ಮೂಲಕ ಕ್ವಿಂಟಾಲ್‌ಗೆ 1200 ರೂ.ಗೆ ಮಾರುಕಟ್ಟೆಯ ಹೊರಗಿನ ರೈತರಿಂದ ಬೆಳೆಗಳನ್ನು ಖರೀದಿಸಿ ನಂತರ ಅದನ್ನು ಕ್ವಿಂಟಲ್‌ಗೆ 1900 ರೂ.ಗೆ ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಈಗ ಪ್ರತಿ ಖರೀದಿ ಕೇಂದ್ರದಲ್ಲಿ ನನ್ನ ಒಬ್ಬ ಪ್ರತಿನಿಧಿಯನ್ನು ನಿಲ್ಲಿಸಲಾಗುತ್ತದೆ. ಅವರು ದಾಖಲೆಗಳು ಮತ್ತು ಪುರಾವೆಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಾರೆ ಮತ್ತು ಇದರ ಹೊರತಾಗಿಯೂ, ಭ್ರಷ್ಟಾಚಾರ ಮತ್ತು ರೈತರ ಮೇಲಿನ ದೌರ್ಜನ್ಯದ ಘಟನೆಗಳು ಮುನ್ನೆಲೆಗೆ ಬಂದರೆ ನ್ಯಾಯಾಲಯದ ಮೊರೆ ಹೋಗಿ ಆರೋಪಿಗಳನ್ನು ಬಂಧಿಸುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.