ಲಖನೌ (ಉತ್ತರ ಪ್ರದೇಶ): 32 ವರ್ಷ ಹಿಂದಿನ ಅವಧೇಶ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಶಾಸಕ, ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಗೆ ವಾರಣಾಸಿಯ ಸಂಸದ ಎಂಎಲ್‌ಎ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟ ಮಾಡಿದೆ. ಬಂದಾ ಜೈಲಿನಲ್ಲಿರುವ ಅನ್ಸಾರಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ನ್ಯಾಯಾಲಯವು 1 ಲಕ್ಷ ದಂಡವನ್ನೂ ವಿಧಿಸಿ ಆದೇಶ ನೀಡಿದೆ.
32 ವರ್ಷಗಳ ಹಿಂದೆ ಅಂದ್ರೆ 3 ಆಗಸ್ಟ್ 1991 ರಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿಯೂ ಆಗಿರುವ ಮುಕ್ತಾರ್ ಅನ್ಸಾರಿ ಅವರನ್ನು ದೋಷಿ ಎಂದು ಹೇಳಿದ್ದ ನ್ಯಾಯಾಲಯವು ಇಂದು ತೀರ್ಪು ಪ್ರಕಟ ಮಾಡಿದೆ. ಹಳೆಯ ಪ್ರಕರಣವಾಗಿದ್ದರಿಂದ, ಅಲ್ಲದೇ ಗಂಭೀರ ಸ್ವರೂಪದ್ದಾಗಿದ್ದರಿಂದ ಈ ನ್ಯಾಯಾಲಯದ ಸುತ್ತಲು ಬಿಗಿ ಭದ್ರತೆ ಒದಗಿಸಲಾಗಿತ್ತು.
ನ್ಯಾಯಾಲದ ಆದೇಶಕ್ಕೂ ಮುನ್ನ ಅವಧೇಶ್ ರೈ ಅವರ ಸಹೋದರ ಹಾಗೂ ಮಾಜಿ ಶಾಸಕ ಅಜಯ್ ರೈ ಮಾತನಾಡಿ, ಇದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ. ನಮ್ಮ ಇಡೀ ಕುಟುಂಬ ಈ ಆದೇಶಕ್ಕಾಗಿ ಕಾಯುತ್ತಿತ್ತು. ನಮ್ಮ ತಾಳ್ಮೆಗೆ ಇದೀಗ ನ್ಯಾಯ ಸಿಕ್ಕಿದೆ. ಮುಖ್ತಾರ್ ಅನ್ಸಾರಿಯ ಬೆದರಿಕೆಗೆ ನಾವು ಯಾವತ್ತೂ ಜಗ್ಗಲಿಲ್ಲ. ಅಲ್ಲದೇ ಎಷ್ಟೋ ಸರ್ಕಾರಗಳು ಬಂದು ಹೋದವು. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇತ್ತು. ನಮ್ಮ ಇಷ್ಟು ದಿನಗಳ ಹೋರಾಟ ನಮಗೆ ನೆಮ್ಮದಿ ತರಿಸಿದೆ. ನಾವು ಹಾಗೂ ನಮ್ಮ ವಕೀಲರ ಪ್ರಯತ್ನದಿಂದಾಗಿ ಇಂದು ನ್ಯಾಯಾಲಯವು ನನ್ನ ಸಹೋದರನ ಕೊಲೆ ಪ್ರಕರಣದಲ್ಲಿ ಮುಖ್ತಾರ್‌ನನ್ನು ದೋಷಿ ಎಂದು ಆದೇಶ ನೀಡಿದೆ. ಇದೀಗ ನ್ಯಾಯಾಧಿಕರಣ ಕೂಡ ಮುಕ್ತಾರ್ ಅನ್ಸಾರಿಗೆ ಸೂಕ್ತ ಶಿಕ್ಷೆ ನೀಡುವ ನಿರೀಕ್ಷೆ ಇದೆ ಎಂದು ಹೇಳಿದ್ದರು.