ವಾರಾಣಸಿ (ಉತ್ತರ ಪ್ರದೇಶ): ಧಾರ್ಮಿಕ ನಗರಿ ಕಾಶಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾಶಿ ಹಿಂದೂ ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ 14 ದಿನಗಳ ಹೆಣ್ಣು ಮಗು 'ಗರ್ಭಿಣಿ' ಯಾಗಿರುವ ಅಚ್ಚರಿಯ ಘಟನೆ ನಡೆದಿದೆ. ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ. ಇದನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.
ಈ ಕುರಿತು ವೈದ್ಯರ ತನಿಖೆ ವೇಳೆ ಬಯಲಿಗೆ ಬಂದಿರುವ ವಿಷಯ ಇನ್ನಷ್ಟು ಅಚ್ಚರಿ ಮೂಡಿಸಿದೆ. ವಾಸ್ತವವಾಗಿ, ಆ ಮಗುವಿಗೆ ಹೊಟ್ಟೆಯಿಂದ ಹೊರಬಂದ ಭ್ರೂಣಗಳು ಮಗುವಿನ ಇತರ ಒಡಹುಟ್ಟಿದವರಂತೆಯೇ ಇವೆ. ತಾಯಿಯ ಗರ್ಭದಲ್ಲೇ ಇದ್ದ ಈ ಭ್ರೂಣಗಳು ಈ ಮಗುವಿನ ಹೊಟ್ಟೆಗೆ ವರ್ಗಾವಣೆಯಾಗಿವೆ. ಮಗುವಿನ ಹೊಟ್ಟೆಯಲ್ಲಿ ಈ ರೀತಿಯ ಭ್ರೂಣ ಇದ್ದರೆ ಅದನ್ನು ಫೆಟಸ್ ಫಿಟು ಎಂಬ ರೋಗದ ಲಕ್ಷಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇದು 5 ಲಕ್ಷಗಳಲ್ಲಿ ಒಂದು ಮಗುವಿನಲ್ಲಿ ಕಂಡುಬರುತ್ತದೆ. ಮಗುವಿನ ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಇತರ ಭ್ರೂಣಗಳು ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಗದ ಕಾರಣ, ಬೆಳವಣಿಗೆ ಹೊಂದುತ್ತಿದ್ದ ಈ ಮಗುವಿನ ಹೊಟ್ಟೆಗೆ ವರ್ಗಾಯಿಸಲ್ಪಡುತ್ತವೆ ಅಂತಾರೆ ವೈದ್ಯರು.
ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಹೇಗೆ ಗೊತ್ತಾಯಿತು: 14 ದಿನದ ಹೆಣ್ಣು ಮಗು ಹೊಟ್ಟೆಯಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಇದಾದ ಬಳಿಕ ಮಗುವನ್ನು ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳಿರುವುದು ಪತ್ತೆಯಾಗಿತ್ತು. ನಂತರ ವೈದ್ಯರು ಸಿಟಿ ಸ್ಕ್ಯಾನ್ ಮಾಡಿ ಈ ವಿಷಯ ದೃಢಪಡಿಸಿದ್ದರು.
ಇದನ್ನೂ ಓದಿ:ರಾಷ್ಟ್ರೀಯ ಸುರಕ್ಷಾ ತಾಯ್ತನ ದಿನ 2023: ತಾಯಂದಿರ ಆರೋಗ್ಯ ಆರೈಕೆ ಸೇವೆಗೆ ನೀಡಬೇಕಿದೆ ಒತ್ತು