ವಾರಣಾಸಿ( ಉತ್ತರಪ್ರದೇಶ): ದೇವಾಲಯಗಳ ಸ್ಥಳವೆಂದೇ ಪ್ರಖ್ಯಾತಿ ಪಡೆದಿರುವ ವಾರಣಾಸಿಗೆ ನಿತ್ಯ ನೂರಾರು ಯಾತ್ರಿಕರು ಬರುತ್ತಾರೆ. ಆದ್ರೆ ಅಲ್ಲಿಗೆ ಬರುವವರಿಗೆಲ್ಲಾ ಸರಿಯಾದ ಆಹಾರ ದೊರಕುವುದಿಲ್ಲ. ಹಾಗಾಗಿ ಇಲ್ಲಿಗೆ ಬರುವ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಮೊಹಮ್ಮದ್ ಮುಸ್ತಫಾ ಎಂಬುವವರು ಆಹಾರವನ್ನು ನೀಡಲು 'ರೋಟಿ ಬ್ಯಾಂಕ್' ಎಂಬ ವಿಶಿಷ್ಟ ಯೋಜನೆ ಆರಂಭಿಸಿದ್ದಾರೆ.
ರೈಲ್ವೆ ಅಧಿಕಾರಿಯಾಗಿರುವ ಮುಸ್ತಫಾ ಅವರು ಕಳೆದ ಎರಡು ವರ್ಷಗಳಿಂದ ಬಡವರಿಗೆ ಮತ್ತು ಯಾತ್ರಾರ್ಥಿಗಳಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಸ್ಥಳೀಯರು ಸಹ ಬೆಂಬಲವನ್ನು ನೀಡುತ್ತಿದ್ದಾರೆ.
ವಿವಾಹ ಕಾರ್ಯಕ್ರಮ, ದೊಡ್ಡ ಪಕ್ಷಗಳ ಕಾರ್ಯಕ್ರಮ, ಯಾವುದೇ ದೊಡ್ಡ ಪ್ರಮಾಣದ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ಉಳಿದಿರುವ ಆಹಾರವನ್ನು ಮುಸ್ತಫಾ ಮತ್ತು ಅವರ ತಂಡ ಸಂಗ್ರಹಿಸುತ್ತದೆ. ಬಳಿಕ ಈ ಆಹಾರವನ್ನು ಅಗತ್ಯ ಇರುವವರಿಗೆ ವಿತರಿಸುತ್ತದೆ. ಆಹಾರವನ್ನು ನಗರದಾದ್ಯಂತ ವಿವಿಧ ಪ್ರದೇಶಗಳಲ್ಲಿ ವಿತರಿಸಲಾಗುತ್ತದೆ.