ವಾರಣಾಸಿ (ಉತ್ತರ ಪ್ರದೇಶ):ಭೋಜ್ಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ದುಬೆ ಸಾವು ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಆರೋಪಿಗಳಾದ ಗಾಯಕ ಸಮರ್ ಸಿಂಗ್ ಮತ್ತು ಆತನ ಸಹೋದರ ಸಂಜಯ್ ಸಿಂಗ್ ಅವರ ಡಿಎನ್‌ಎ ಪರೀಕ್ಷೆಗೆ ಪೊಲೀಸರು ನಿರ್ಧರಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು ಪ್ರಯೋಗಾಲಯದಲ್ಲಿ ಆಕಾಂಕ್ಷಾ ಅವರ ಬಟ್ಟೆಗಳನ್ನು ಪರೀಕ್ಷಿಸಿದ ವರದಿ ಸ್ವೀಕರಿಸಿದ ನಂತರ ಆರೋಪಿಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಪ್ರಸ್ತುತ ಜೈಲುವಾಸ ಅನುಭವಿಸುತ್ತಿರುವ ಸಮರ್ ಸಿಂಗ್ ಹಾಗೂ ಸಂಜಯ್ ಸಿಂಗ್ ಅವರನ್ನು ಡಿಎನ್‌ಎ ಟೆಸ್ಟ್ಗೆ ಒಳಪಡಿಸಲು ಶೀಘ್ರದಲ್ಲೇ ಪೊಲೀಸರು ನ್ಯಾಯಲಯದಿಂದ ಅನುಮತಿ ಪಡೆಯಲು ತೀರ್ಮಾನಿಸಿದ್ದಾರೆ. ಕಳೆದ ಮಾರ್ಚ್ 25 ರಂದು ವಾರಣಾಸಿಯ ಹೋಟೆಲ್ ಒಂದರಲ್ಲಿ ನಟಿ ಆಕಾಂಕ್ಷಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾರ್ಚ್ 27 ರಂದು ನಟಿಯ ತಾಯಿ ಮಧು ದುಬೆ ಅವರು ಭೋಜ್ಪುರಿ ಗಾಯಕ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ತನ್ನ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಏಪ್ರಿಲ್ 6 ರಂದು ಗಾಯಕ ಸಮರ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಮಧು ದುಬೆ ವಕೀಲ ಶಶಾಂಕ್ ಶೇಖರ್ ತ್ರಿಪಾಠಿ ಮಾತನಾಡಿ, "ಮೂರು ತಜ್ಞರ ತಂಡವು ಆಕಾಂಕ್ಷಾ ದುಬೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ನಟಿ ಧರಿಸಿದ್ದ ಬಟ್ಟೆ ಹಾಗೂ ಗುಪ್ತಾಂಗಗಳ ಸ್ವಾಬ್ಗಳನ್ನು ಫೋರೆನ್ಸಿಕ್ ಮತ್ತು ಪಾಥೋಲಾಜಿಕಲ್ ಪರೀಕ್ಷೆ ಕಳುಹಿಸಲಾಗಿತ್ತು. ಈಗ ಬಟ್ಟೆಯ ವರದಿ ಬಂದಿದೆ" ಎಂದು ತಿಳಿಸಿದರು. ಮತ್ತೊಂದೆಡೆ, ಬಟ್ಟೆ ಪರೀಕ್ಷೆ ವರದಿಯನ್ನು ಆಧರಿಸಿ 4 ಜನರ ಡಿಎನ್‌ಎ ಪ್ರೊಫೈಲಿಂಗ್ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ನ್ಯಾಯಾಲಯದ ಅನುಮತಿ ಪಡೆಯಲು ಶೀಘ್ರದಲ್ಲೇ ಲಿಖಿತ ಅರ್ಜಿ ಸಲ್ಲಿಸುತ್ತೆವೆ. ಅನುಮತಿಯ ನಂತರ ಸಮರ್ ಸಿಂಗ್, ಸಂಜಯ್ ಸಿಂಗ್, ಅರುಣ್ ಪಾಂಡೆ ಸಂದೀಪ್ ಸಿಂಗ್ ಅವರ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಡಿಸಿಪಿ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.