ಲಖನೌ(ಉತ್ತರ ಪ್ರದೇಶ):ತೀವ್ರ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ.
ಇದರ ಮಧ್ಯೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಾರಣಾಸಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಕಳ್ಳತನದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರಿ ಅಧಿಕಾರಿಯನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ವಾರಣಾಸಿ ಜಿಲ್ಲಾಧಿಕಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ಇವಿಎಂಗಳ ಸಾಗಾಟ ಮಾಡ್ತಿದ್ದು, ಚುನಾವಣಾ ಆಯೋಗ ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ:ನಾಳೆ ಇಡೀ ದೇಶದ ಚಿತ್ತ ಯುಪಿ ಫಲಿತಾಂಶದತ್ತ!: ಜಿದ್ದಾಜಿದ್ದಿನ ಮತಸಮರದಲ್ಲಿ ಗೆದ್ದು ಬೀಗುವವರಾರು?
ಮತ ಎಣಿಕೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಗಂಭೀರ ಆರೋಪ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್(ಜಿಲ್ಲಾಧಿಕಾರಿ) ಕೌಶಲ್ ರಾಜ್ ಶರ್ಮಾ, ಈ ಇವಿಎಂಗಳನ್ನು ಮತದಾನಕ್ಕಾಗಿ ಬಳಕೆ ಮಾಡಿರಲಿಲ್ಲ. ಹೀಗಾಗಿ ಬೇರೆಡೆ ಸ್ಥಳಾಂತರ ಮಾಡಲಾಗುತ್ತಿತ್ತು ಎಂದು ಸ್ಪಷ್ಟೀಕರಣ ನೀಡಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚು.ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಅಧಿಕಾರಿಗಳಿಂದ ವೋಟಿಂಗ್ ಮಷಿನ್ ಟ್ಯಾಂಪರಿಂಗ್, ಅಭ್ಯರ್ಥಿಗಳಿಗೆ ಮಾಹಿತಿ ನೀಡದೇ ಸಾಗಾಟ: ಅಖಿಲೇಶ್
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನವಾಗಿದ್ದು, ಗುರುವಾರ ಎಲ್ಲ ಕ್ಷೇತ್ರದ ಫಲಿತಾಂಶ ಬಹಿರಂಗವಾಗಲಿದೆ.