ವಾರಣಾಸಿ:ರಸ್ತೆ ಸಂಚಾರದ ವೇಳೆ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗಿರುವುದು ಕಡ್ಡಾಯ. ಆದರೆ, ಈ ನಿಯಮಗಳು ತನಗಲ್ಲ ಎಂದು ಹಠ ಮಾಡಿದ ಓಲಾ ಬೈಕ್ ಟ್ಯಾಕ್ಸಿ ಚಾಲಕನ ವಿರುದ್ಧ ಗ್ರಾಹಕರು ಪೊಲೀಸರಿಗೆ ದೂರು ನೀಡಿರುವ ಪ್ರಕರಣ ನಡೆದಿದೆ.
ವಾರಣಾಸಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಓಲಾ ಬೈಕ್ ಟಾಕ್ಸಿಯನ್ನು ಬುಕ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಬಂದ ಚಾಲಕ, ಗ್ರಾಹಕರನ್ನು ಕೂರಿಸಿಕೊಂಡು ಬಿಡಬೇಕಿರುವ ಸ್ಥಳಕ್ಕೆ ಸಜ್ಜಾಗಲು ಮುಂದಾಗಿದ್ದಾನೆ. ಈ ವೇಳೆ ಗ್ರಾಹಕರು ಆತನಿಗೆ ಹೆಲ್ಮೆಟ್ ಧರಿಸುವಂತೆ ತಿಳಿಸಿದ್ದಾರೆ. ಆದರೆ, ಚಾಲಕ ಮಾತ್ರ ಹೆಲ್ಮೆಟ್ ಧರಿಸಲು ನಿರಾಕರಿಸಿದ್ದಾನೆ. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಚಾಲಕನ ವಿರುದ್ಧ ಗ್ರಾಹಕರು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಬೈಕ್ ಸರ್ವಿಸ್ ಒದಗಿಸುತ್ತಿದ್ದ ಓಲಾ ಕಂಪನಿ ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡಿದ್ದು, ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಗ್ರಾಹಕರಾದ ಸತ್ಯ ಫೌಂಡೆಷನ್ ಕಾರ್ಯದರ್ಶಿ ಚೇತನ್ ಉಪಾಧ್ಯಾಯ್, ಬುಧವಾರ ಸಾಮಾಜಿಕ ಕಾರ್ಯಕ್ರಮಲ್ಲಿ ಭಾಗಿಯಾಗುವ ಸಂಬಂಧ ತೆರಳಲು ಓಲಾ ಬೈಕ್ ಬುಕ್ ಮಾಡಿದೆ. ಸರಿಯಾದ ಸಮಯಕ್ಕೆ 65 ಬಿಸಿ- 2520 ಸಂಖ್ಯೆ ಹೊಂದಿದ್ದ ಬೈಕ್ ಸ್ಥಳಕ್ಕೆ ಆಗಮಿಸಿತು. ಓಲಾ ಡ್ರೈವರ್ ಒಟಿಪಿ ಪಡೆದ. ಇದಾದ ಬಳಿಕ ಆತ ಹೆಲ್ಮೆಟ್ ಧರಿಸುವುದಿಲ್ಲ ಎಂದಿದ್ದಾನೆ.
ಇದೇ ವೇಳೆ ಯಾಕೆ ಹೆಲ್ಮೆಟ್ ಧರಿಸುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ತಮ್ಮ ಜೀವನದಲ್ಲಿ ಎಂದೂ ಹೆಲ್ಮೆಟ್ ಧರಿಸಿಲ್ಲ. ಮುಂದೆ ಎಂದೂ ಹೆಲ್ಮೆಟ್ ಧರಿಸಬಾರದು ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ. ಟ್ರಾಫಿಕ್ ನಿಯಮ ಪಾಲನೆ ಮಾಡಬೇಕು ಅಲ್ವಾ ಎಂದು ಗ್ರಾಹಕ ಪ್ರಶ್ನೆ ಮಾಡಿದ್ದಕ್ಕೆ, ಆತ ಬೈಕ್ ಸೇವೆ ನೀಡಲು ನಿರಾಕರಿಸಿದ್ದು, ಬರುವುದಿದ್ದರೆ ಬನ್ನಿ, ಇಲ್ಲ ಬಿಡುವಂತೆ ತಿಳಿಸಿದ. ಇದಾದ ಬಳಿಕ ಓಲಾ ಕಂಪನಿಯ ಮುಖ್ಯ ಕಚೇರಿಗೆ ಈ ಸಂಬಂಧ ವರದಿ ಮಾಡಿದೆ. ವಾರಣಾಸಿ ಟ್ರಾಫಿಕ್ ಪೊಲೀಸ್ ಎಸಿಪಿ ವಿಕಾಸ್ ಶ್ರೀವಾತ್ಸವ್ಗೆ ಕೂಡ ಫೋನ್ ಮೂಲಕ ತಿಳಿಸಿದೆ.
ಹೆಲ್ಮೆಟ್ ಹಾಕಲು ನಿರಾಕರಿಸಿದ ಓಲಾ ಬೈಕ್ ಡ್ರೈವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸಿಪಿಗೆ ಲಿಖಿತ ದೂರನ್ನು ಕೂಡ ಸಿಯುಜಿ ವಾಟ್ಸಾಪ್ ಮೂಲಕ ಕಳುಹಿಸಿದೆ. ದೂರು ಸ್ವೀಕರಿಸಿದ ಒಂದು ಗಂಟೆಯೊಳಗೆ ವಾರಾಣಾಸಿ ಟ್ರಾಫಿಕ್ ಅಸಿಸ್ಟಂಟ್ ಕಮಿಷನರ್ ಓಲಾ ಕಂಪನಿ ಮುಖ್ಯ ಕಚೇರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್ನಲ್ಲಿ ಕಂಪನಿಯ ಎಲ್ಲಾ ಡ್ರೈವರ್ಗಳು ಸೀಟ್ ಬೆಲ್ಟ್, ಹೆಲ್ಮೆಟ್ ಹಾಕುವುದು ಸೇರಿದಂತೆ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಹೊಂದಿರಬೇಕು. ಈ ನಿಯಮವನ್ನು ಎಲ್ಲಾ ಚಾಲಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.