ವಾರಣಾಸಿ: ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಗೂ ಮುನ್ನ ವಾರಣಾಸಿಯಲ್ಲಿ ಜಿಲ್ಲಾ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಏಪ್ರಿಲ್ 18ರಂದು ದೆಹಲಿಯ ರಾಖಿಸಿಂಗ್, ಲಕ್ಷ್ಮಿದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್ ಎಂಬ ಐವರು ಮಹಿಳಾ ಭಕ್ತರು ಸಿವಿಲ್ ನ್ಯಾಯಾಲಯದಲ್ಲಿ ಮಸೀದಿ ಆವರಣದಲ್ಲಿ ಗೌರಿ ದೇವಿಯನ್ನು ಪೂಜಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ನ್ಯಾಯಾಧೀಶ ಡಾ. ಅಜಯ್ ಕೃಷ್ಣ ಅವರನ್ನು ಒಳಗೊಂಡಿರುವ ಪೀಠ ವಾದ ಪ್ರತಿವಾದ ಆಲಿಸಲಿದೆ.
ಪ್ರಕರಣದ ವಿಚಾರಣೆಗೆ ಯಾವುದೇ ಕಡೆಯಿಂದ ಯಾವುದೇ ತೊಂದರೆಯಾಗದಂತೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಾವು ಸಾಕಷ್ಟು ಪಡೆಗಳನ್ನು ನಿಯೋಜಿಸಿದ್ದೇವೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
ಈ ಹಿಂದೆ ಈ ಮಹಿಳೆಯರ ತಂಡ ಪ್ರಕರಣವನ್ನು ದಾಖಲಿಸಿದಾಗ, ಅಜಯ್ ಕುಮಾರ್ ಮಿಶ್ರಾ ಅವರನ್ನು ಜ್ಞಾನವಾಪಿ ಮಸೀದಿಯ ಸಮೀಕ್ಷೆಗಾಗಿ ವಕೀಲರ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ನ್ಯಾಯಾಲಯದ ಆಯೋಗವು ಮೇ 6ರಂದು ಜ್ಞಾನವಾಪಿ ಸಮೀಕ್ಷೆಯನ್ನು ಪ್ರಾರಂಭಿಸಿತು. ಆದರೆ, ಮಿಶ್ರಾ ಅವರು ಪಕ್ಷಪಾತದ ಸ್ವಭಾವವನ್ನ ಹೊಂದಿದ್ದಾರೆ ಎಂದು ಉಲ್ಲೇಖಿಸಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿತ್ತು.