ಭೋಪಾಲ್(ಮಧ್ಯಪ್ರದೇಶ):ಎರಡನೇ ಹಂತದ ಕೊರೊನಾ ವೈರಸ್ ಸಾವಿರಾರು ಜನರ ಬಲಿ ಪಡೆದುಕೊಂಡಿದ್ದು, ಇದರಿಂದ ಅನೇಕ ಮಕ್ಕಳು ಅನಾಥರಾಗಿದ್ದಾರೆ. ಮಧ್ಯಪ್ರದೇಶದ ವನಿಶಾ ಪಾಠಕ್ ಕೂಡ ಕೋವಿಡ್ನಿಂದ ಪೋಷಕರ ಕಳೆದುಕೊಂಡಿದ್ದು, ಇದರ ಮಧ್ಯೆ ಕೂಡ ಸಿಬಿಎಸ್ಇಯಲ್ಲಿ ಶೇ.99.8ರಷ್ಟು ಅಂಕ ಗಳಿಕೆ ಮಾಡಿದ್ದಾಳೆ.
10ನೇ ತರಗತಿ ಸಿಬಿಎಸ್ಇ ಪರೀಕ್ಷಾ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಅನೇಕ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ, ಭವಿಷ್ಯದ ಕನಸು ಕಾಣುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ವನಿಶಾ ಪಾಠಕ್ ಪೋಷಕರ ಕಳೆದುಕೊಂಡ ನೋವಿನಲ್ಲೂ ಉತ್ತಮ ಸಾಧನೆ ಮಾಡಿದ್ದಾಳೆ. ವನಿಶಾ, ಇಂಗ್ಲೀಷ್, ಸಂಸ್ಕೃತಿ, ವಿಜ್ಞಾನ ಹಾಗೂ ಸಾಮಾಜ-ವಿಜ್ಞಾನದಲ್ಲಿ 100ಕ್ಕೆ 100ರಷ್ಟು ಅಂಕ ಪಡೆದಿದ್ದು, ಗಣಿತ ವಿಷಯದಲ್ಲಿ ಮಾತ್ರ 97 ಅಂಕ ಗಳಿಕೆ ಮಾಡಿದ್ದಾಳೆ.
ಇದೇ ವಿಚಾರವಾಗಿ ಈಟಿವಿ ಭಾರತ ಜೊತೆ ಮಾತನಾಡಿರುವ ವಿದ್ಯಾರ್ಥಿನಿ ವನಿಶಾ,IITಯಲ್ಲಿ ಉನ್ನತ ವ್ಯಾಸಂಗ ಮಾಡುವ ನಿರ್ಧಾರ ಮಾಡಿದ್ದು, ಅದು ನನ್ನ ಪೋಷಕರ ಕನಸಾಗಿದೆ. ಅದನ್ನ ಈಡೇರಿಸಬೇಕಾಗಿರುವುದು ನನ್ನ ಆದ್ಯ ಕರ್ತವ್ಯ ಎಂದು ತಿಳಿಸಿದ್ದಾಳೆ. IIT ಮಾಡಿದ ಬಳಿಕ ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿ ದೇಶ ಸೇವೆ ಮಾಡುವ ಕನಸು ಕಾಣುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿರಿ: "ಸೆಮಿಫೈನಲ್ ಸೋಲಿನಿಂದ ನಿರಾಶರಾಗಬೇಡಿ": ಹಾಕಿ ಕ್ಯಾಪ್ಟನ್ ರಾಣಿ ಜೊತೆ ನಮೋ ಮಾತು
ವನಿಶಾ ತಂದೆ ಜಿತೇಂದ್ರ ಕುಮಾರ್ ಹಣಕಾಸು ಸಲಹೆಗಾರರಾಗಿದ್ದರು. ಇವರ ತಾಯಿ ಸೀಮಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕೊರೊನಾ ಸೋಂಕಿಗೊಳಗಾಗಿದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದರು. ಪೋಷಕರ ಕಳೆದುಕೊಂಡಿರುವ ವನಿಶಾ ಇದೀಗ ತನ್ನ 10 ವರ್ಷದ ಸಹೋದರನೊಂದಿಗೆ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದಾಳೆ.