ಮುಂಬೈ (ಮಹಾರಾಷ್ಟ್ರ): ಭಾರತೀಯ ರೈಲ್ವೆ ದೇಶದ ಜನತೆಯ ಸಂಚಾರ ನಾಡಿಯಾಗಿದೆ. ಅಗ್ಗ ದರ ಮತ್ತು ಸುಲಭ ಲಭ್ಯತೆಯ ಕಾರಣಕ್ಕೆ ಬಹುಪಾಲು ಪ್ರಯಾಣಿಕರು ರೈಲು ಪ್ರಯಾಣ ಅವಲಂಬಿಸಿದ್ದಾರೆ. ಇತ್ತೀಚೆಗೆ ಆರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಶಸ್ವಿ ಸಂಚಾರ ನಡೆಸುತ್ತಿದೆ. ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು ಅಲ್ಪಾವಧಿಯಲ್ಲಿಯೇ ಸಾಕಷ್ಟು ಪ್ರಯಾಣಿಕರ ಮೆಚ್ಚುಗೆ ಗಿಟ್ಟಿಸಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾದರಿಯಲ್ಲೇ ವಂದೇ ಮೆಟ್ರೋ ಆರಂಭಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ.
ಇದನ್ನೂ ಓದಿ:ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್
ವಂದೇ ಭಾರತ್ ರೈಲನ್ನು ದೂರ ಪ್ರಯಾಣ ಮತ್ತು ದೊಡ್ಡ-ದೊಡ್ಡ ನಗರಗಳ ಮಧ್ಯೆ ಆರಂಭಿಸಲಾಗಿದೆ. ಪ್ರಸ್ತುತ ದೇಶದಲ್ಲಿ 18 ವಂದೇ ಭಾರತ್ ರೈಲುಗಳು ಓಡುತ್ತಿವೆ. ಈ ರೈಲು ಯಶಸ್ವಿಯಾದ ಬೆನ್ನಲ್ಲೇ ಶೀಘ್ರದಲ್ಲೇ ದೊಡ್ಡ ನಗರಗಳಲ್ಲಿ ವಂದೇ ಮೆಟ್ರೋವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ.
ವಂದೇ ಮೆಟ್ರೋ ನಗರದೊಳಗಿನ ಪ್ರಯಾಣಕ್ಕೆ ಉಪಯುಕ್ತ. ಇದು ಎಸಿ ಲೋಕಲ್ನಂತೆ ಸಂಪೂರ್ಣ ಹವಾನಿಯಂತ್ರಿತವಾಗಿರಲಿದೆ. ಮುಂಬೈ ರೈಲ್ವೆ ವಿಕಾಸ್ ಕಾರ್ಪೊರೇಷನ್ (ಎಂಆರ್ವಿಸಿ), ರೈಲ್ವೆ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಮುಂಬೈನಲ್ಲಿ ಮೊದಲ ವಂದೇ ಮೆಟ್ರೋ ಪ್ರಾರಂಭವಾಗಲಿದೆ ಎಂದು ಪಿಆರ್ಒ ಶಿವರಾಜ್ ಮನಸ್ಪುರೆ ಮಾಹಿತಿ ನೀಡಿದರು. ಅಲ್ಲದೇ, ಶೀಘ್ರದಲ್ಲೇ ಮುಂಬೈ, ದೆಹಲಿ, ಕೋಲ್ಕತ್ತಾ ನಗರಗಳಲ್ಲೂ ವಂದೇ ಮೆಟ್ರೋ ಸಂಚರಿಸಲಿದೆ ಎಂದರು.