ನವದೆಹಲಿ: ಕೆಲವು ದುಷ್ಕರ್ಮಿಗಳು ಹಳಿಯ ಮೇಲೆ ಕಲ್ಲುಗಳು ಮತ್ತು ಕಬ್ಬಿಣದ ರಾಡ್ಗಳನ್ನಿರಿಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿ ಮತ್ತು ಸಿಬ್ಬಂದಿ ರೈಲನ್ನು ತುರ್ತಾಗಿ ನಿಲ್ಲಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ. ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯಲ್ಲಿ ರೈಲ್ವೆ ಅಧಿಕಾರಿಗಳು ಹಳಿಯ ಮೇಲೆ ಕಲ್ಲು, ಬಂಡೆ ಮತ್ತು ರಾಡ್‌ಗಳನ್ನು ಪತ್ತೆ ಹಚ್ಚಿ ಉದಯಪುರದಿಂದ ಜೈಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ಸಂಚಾರ ತಡೆದಿದ್ದಾರೆ.
"20979 ಸಂಖ್ಯೆಯ ವಂದೇ ಭಾರತ್ ರೈಲು ಉದಯಪುರ-ಜೈಪುರ ಗಂಗರಾರ್-ಸೋನಿಯಾನಾ ವಿಭಾಗದಲ್ಲಿ ಕೆಎಂ ಸಂಖ್ಯೆ 158/18, 158/19ರಲ್ಲಿ ನಿಲ್ಲಿಸಲಾಗಿತ್ತು. ಆರ್‌ಪಿಎಫ್ / ಪೋಸ್ಟ್ / ಭಿಲ್ವಾರಾ ವ್ಯಾಪ್ತಿಯಲ್ಲಿ ಬೆಳಗ್ಗೆ 09:55 ರ ಸುಮಾರಿಗೆ ಘಟನೆ ಸಂಭವಿಸಿದೆ. ಈ ಸ್ಥಳವು ಚಿತ್ತೋರ್ಗಢ ಜಿಲ್ಲೆಯ ಎಸ್ಎಚ್ಒ / ಗಂಗರಾರ್ ವ್ಯಾಪ್ತಿಗೆ ಬರುತ್ತದೆ" ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಡಿಎಸ್‌ಸಿ ಅಜ್ಮೀರ್, ಐಪಿಎಫ್ ಭಿಲ್ವಾರಾ, ಪಿಡಬ್ಲ್ಯುಐ ಗಂಗರಾರ್, ಸ್ಥಳೀಯ ಪೊಲೀಸರು ಮತ್ತು ಜಿಆರ್‌ಪಿ ಅಧಿಕಾರಿಗಳು ಭೇಟಿ ನೀಡಿದ ನಂತರ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿ ಗಂಗಾರಾರ್-ಸೋನಿಯಾನಾ ವಿಭಾಗದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಕಲ್ಲುಗಳು ಮತ್ತು ರಾಡ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ. ಈ ವರ್ಷಾರಂಭದಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿರುವ ಪ್ರಕರಣಗಳು ಹಲವು ರಾಜ್ಯಗಳಲ್ಲಿ ವರದಿಯಾಗಿದ್ದವು.
ಈ ಹಿಂದಿನ ಘಟನೆ:ಇತ್ತೀಚೆಗೆ, ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಕ್ನೋ ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದರು. ಮಲ್ಹೌರ್ ಬಳಿ ಗೋರಖ್‌ಪುರದಿಂದ ಲಕ್ನೋಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಗಾಜಿಗೆ ಹಾನಿಯಾಗಿತ್ತು. ಕಲ್ಲು ತೂರಾಟ ನಡೆಸಿದವರಿಗಾಗಿ ಆರ್‌ಪಿಎಫ್ ಹುಡುಕಾಟ ಆರಂಭಿಸಿತ್ತು. ರೈಲು ಗೋರಖ್‌ಪುರದಿಂದ ಲಕ್ನೋಗೆ ಸಂಚಾರ ಮಾಡುತ್ತಿತ್ತು. ಇದೇ ವೇಳೆ ಮಲ್ಹೌರ್ ರೈಲು ನಿಲ್ದಾಣದ ಮೂಲಕ ಸಾಗುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಇದರಿಂದಾಗಿ ರೈಲಿನ ಕೋಚ್ ಸಂಖ್ಯೆ ಸಿ - 3 ಮೂರರ ಗಾಜು ಜಖಂಗೊಂಡಿತ್ತು.
ಇದನ್ನೂ ಓದಿ:Vande Bharat trains: ವಂದೇ ಭಾರತ್ ರೈಲುಗಳಲ್ಲಿ'14 ನಿಮಿಷಗಳ ಮಿರಾಕಲ್' ಸ್ವಚ್ಛತೆ ಆರಂಭ