ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಮಾಣಪತ್ರದ ಮಾನ್ಯತೆಯನ್ನು 7 ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ.
ಈ ನಿಯಮವು 2011ರಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದ್ದು, ಈಗಾಗಲೇ ಏಳು ವರ್ಷಗಳ ಅವಧಿ ಮುಗಿದಿರುವ ಶಿಕ್ಷಕರಿಗೆ ಹೊಸದಾಗಿ ಟಿಇಟಿ ಪ್ರಮಾಣಪತ್ರಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವರು ನಿರ್ದೇಶಿಸಿದ್ದಾರೆ.
ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ನಮ್ಮ ಈ ನಿರ್ಧಾರವು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ.
ಟಿಇಟಿ
ಶಿಕ್ಷಕರ ಅರ್ಹತಾ ಪರೀಕ್ಷೆಯು ಒಬ್ಬ ವ್ಯಕ್ತಿಯು ಶಾಲೆಗಳಲ್ಲಿ ಶಿಕ್ಷಕನಾಗಿ ನೇಮಕಗೊಳ್ಳಲು ಅರ್ಹತೆ ಪಡೆಯಲು ಅಗತ್ಯವಾದ ಅರ್ಹತೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಮಾರ್ಗಸೂಚಿಗಳ ಮೇರೆಗೆ ಟಿಇಟಿಯನ್ನು ರಾಜ್ಯ ಸರ್ಕಾರಗಳು ನಡೆಸುತ್ತವೆ. 2011ರ ಫೆಬ್ರವರಿ 11 ರಂದು ಎನ್‌ಸಿಟಿಇ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಟಿಇಟಿ ಪ್ರಮಾಣಪತ್ರದ ಸಿಂಧುತ್ವವು ಟಿಇಟಿ ಉತ್ತೀರ್ಣರಾದ ದಿನಾಂಕದಿಂದ 7 ವರ್ಷಗಳವರೆಗೆ ಮಾತ್ರ ಮಾನ್ಯವಾಗಿತ್ತು. ಇದೀಗ ಈ ಅವಧಿಯನ್ನು ಜೀವಿತಾವಧಿವರೆಗೂ ವಿಸ್ತರಿಸಲಾಗಿದೆ.