ಇಂದು ಪ್ರೇಮಿಗಳ ದಿನಾಚರಣೆ. ಈ ದಿನವನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವ್ಯಾಲೆಂಟೈನ್ಸ್ ಡೇ ಪಾಶ್ಚಾತ್ಯ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು. ಫೆ.7 ರಿಂದ ಪ್ರೇಮಿಗಳು ತಮ್ಮ ಸಂಗಾತಿಗೆ ಹಲವು ರೀತಿ ಸರ್ಪ್ರೈಸ್ ಗಿಫ್ಟ್ಗಳನ್ನು ನೀಡಿರುತ್ತಾರೆ. ಅದು ಹೂವಿರಬಹುದು, ಟೆಡ್ಡಿ ಬೇರ್ ಅಥವಾ ಚಾಕೋಲೇಟ್ಗಳಿರಬಹುದು. ಹೀಗೆ ಕಳೆದೊಂದು ವಾರದಿಂದ ಪ್ರೇಮಿಗಳು ಪ್ರೇಮಲೋಕದಲ್ಲಿ ತೇಲಾಡಿದ್ದಾರೆ. ಪ್ರೇಮಿಗಳ ದಿನದಂದು ಕೆಂಪು ಬಣ್ಣ ಉಡುಗೆ ತೊಡುವುದು ಸಾಮಾನ್ಯ.
"ಪ್ರೀತಿ ಅಥವಾ ಪ್ರೇಮ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಒಂದು ಭಾವ. ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆ". ಪ್ರತಿ ಪ್ರೇಮಿಯ ಮನದಲ್ಲೂ ಹೇಳಿಕೊಳ್ಳಲಾಗದ ಪುಳಕ. ತನ್ನೆದೆಯಲ್ಲಿ ಬೆಚ್ಚಗೆ ಕಾಪಡಿಟ್ಟುಕೊಂಡಿದ್ದ ಪ್ರೀತಿಯಯನ್ನು ತನ್ನೊಲವಿನೆದುರು ಉಸುರುವ ತವಕ. ಅದಕ್ಕಾಗಿ ಫೆಬ್ರವರಿ 14ನೇ ತಾರೀಕಿಗಾಗಿ ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಹಲವರು ತಮ್ಮ ಪ್ರೇಮ ನಿವೇದನೆಗೆ ಇದೇ ಸೂಕ್ತ ದಿನ ಎಂದು ಎಂದುಕೊಂಡಿದ್ದರೆ, ಇನ್ನೂ ಕೆಲವರು ತಮ್ಮೊಲವಿನ ಸಂಗಾತಿಯೊಂದಿಗೆ ಕಾಲ ಕಳೆಯಲು, ಉಡುಗೊರೆ ನೀಡಿ ಸಂಭ್ರಮಿಸಲು ಈ ದಿನಕ್ಕಾಗಿ ಎದುರು ನೋಡುತ್ತಿರುತ್ತಾರೆ.
ಸಂತನೊಬ್ಬ ಪ್ರೇಮಕ್ಕೆ ನೀಡಿದ ಕಾಣಿಕೆ:ಪ್ರೇಮ ಎಂದರೆ ಒಂದು ದಿನದ ಸಂಭ್ರಮವಲ್ಲ, ಪ್ರೇಮವನ್ನು ಪ್ರತಿದಿನ, ಪ್ರತಿಕ್ಷಣ ಅನುಭವಿಸಬೇಕು. ಒಂದು ದಿನದ ಆಚರಣೆಯ ಪ್ರೀತಿ–ಪ್ರೇಮಕ್ಕೆಲ್ಲ ಅರ್ಥವಿಲ್ಲ ಎಂದು ಹೇಳುವವರೂ ನಮ್ಮ ನಡುವೆ ಇದ್ದಾರೆ. ಪ್ರೇಮಿಗಳ ದಿನದ ಆಚರಣೆಯ ಬಗ್ಗೆ ಇಂದಿಗೂ ದ್ವಂದ್ವವಿದೆ. ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವವರ ಪ್ರಕಾರ ಈ ದಿನದ ಆಚರಣೆಗೆ ಅರ್ಥವಿಲ್ಲ. ಆದರೆ ಪ್ರೇಮಿಗಳ ಪ್ರಕಾರ ಈ ದಿನ ಅವರಿಗೆ ಪ್ರಾಮುಖ್ಯವಾದ ದಿನ. ಅದೇನೇ ಬೇಕು ಬೇಡಗಳಿದ್ದರೂ ಪ್ರೇಮಿಗಳ ದಿನದ ಸಂಭ್ರಮ ಮಾತ್ರ ಎಂದಿಗೂ ಮಾಸಿಲ್ಲ. ಈ ವ್ಯಾಲೆಂಟೈನ್ಸ್ ಡೇ ಆಚರಣೆ ಶುರುವಾಗಿದ್ದು ಹೇಗೆ? ಅದರ ಹಿಂದಿರುವ ಅಸಲಿ ಕಹಾನಿ ಏನು? ಎಂಬುದರ ಬಗ್ಗೆ ಕಣ್ಣಾಡಿಸಿದರೆ ಕಥೆ ಕಾಣಿಸುತ್ತದೆ.
ಪ್ರೇಮ ಸಂಭ್ರಮಕ್ಕೂ ಒಂದು ದಿನ ಮೀಸಲಿಟ್ಟರೆ ಚೆನ್ನ ಎಂಬ ಭಾವನೆಯೇ ಎದೆಯಲ್ಲಿ ಕಚಗುಳಿ ಇಡುತ್ತದೆ. ಆದರೆ ಇತ್ತೀಚೆಗೆ ಪ್ರೇಮದ ಸ್ವರೂಪ ಬದಲಾಗಿದೆ. ಪ್ರೇಮವೂ ವ್ಯಾಪಾರವಾಗಿದೆ. ದುಡ್ಡು, ಹಣ ಅಂತಸ್ತು, ಆಸ್ತಿ, ರೂಪ ಇವುಗಳ ಹಿಂದೆ ಓಡುವ ಮನುಷ್ಯ ಪ್ರೇಮದ ಆಳವನ್ನು ಅರಿಯಲು ಪ್ರಯತ್ನಿಸುತ್ತಿಲ್ಲ. ಆದರೆ ಈ ಪ್ರೇಮಿಗಳ ದಿನದ ಹಿಂದಿನ ಕತೆ ಮಾತ್ರ ರೋಚಕವಾಗಿದೆ. ಸಂತರೊಬ್ಬರು ಪ್ರೇಮಕ್ಕೆ ನೀಡಿದ ಕಾಣಿಕೆಯ ಫಲವೇ ಈ ಪ್ರೇಮಿಗಳ ದಿನ ಎಂಬುದು ಹಲವರಿಗೆ ತಿಳಿದಿಲ್ಲ.
ವ್ಯಾಲೆಂಟೈನ್ಸ್ ಡೇ ಇತಿಹಾಸ: ವ್ಯಾಲೆಂಟೈನ್ ಎಂಬ ಸಂತನಿಂದ ವ್ಯಾಲೆಂಟೈನ್ಸ್ ಡೇ ಆರಂಭವಾಗಿದೆ. ಈ ಸಂತರ ಮರಣದ ದಿನವನ್ನು ಇಂದು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತಿದೆ. ಹಾಗಾದರೆ ಸಂತರಿಗೂ ಪ್ರೇಮಕ್ಕೂ ಏನೂ ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದು ಕ್ರಿ.ಶ 270. ರೋಮ್ ಸಾಮ್ರಾಜ್ಯವನ್ನು 2ನೇ ಕ್ಲಾಡಿಯಸ್ ಎಂಬ ರಾಜ ಆಳುತ್ತಿದ್ದ. ತನ್ನ ಸರ್ವಾಧಿಕಾರಿ ಧೋರಣೆಯಿಂದ ಕುಖ್ಯಾತಿ ಪಡೆದಿದ್ದ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್ ಎಂಬ ಸಂತ ಹೊಸ ಬೆಳಕಾಗಿ ಕಾಣಿಸಿಕೊಂಡಿದ್ದರು. ಕ್ಲಾಡಿಯಸ್ ಆಸ್ಥಾನದಲ್ಲಿಯೇ ವ್ಯಾಲೆಂಟೈನ್ ಸಂತನಾಗಿದ್ದರು ಎಂಬುದು ವಿಶೇಷ.
ತನ್ನ ರಾಜಾಢಾಳಿತದ ಅವಧಿಯಲ್ಲಿ ಕ್ಲಾಡಿಯಸ್ ಸೈನಿಕರನ್ನು ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗಬಾರದೆಂದು ಕ್ಲಾಡಿಯಸ್ ಕಟ್ಟಪ್ಪಣೆ ಹೊರಡಿಸಿದ್ದ. ಏಕೆಂದರೆ ಯುವಕರು ಒಬ್ಬಂಟಿಯಾಗಿದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಆತ ನಂಬಿದ್ದ. ಇದರಿಂದ ಸೈನಿಕರಲ್ಲಿ ಬಹಳಷ್ಟು ಮಂದಿ ಕೀಳರಿಮೆಗೆ ಒಳಗಾಗಿದ್ದರು. ತಮ್ಮ ಪ್ರೀತಿ ಪಾತ್ರರನ್ನು ಪಡೆಯಲು ವಿಫರಾಗಿದ್ದರು.
ರಾಜನ ಈ ನಿರ್ಧಾರದ ಬಗ್ಗೆ ವ್ಯಾಲೆಂಟೈನ್ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿ ಕ್ಲಾಡಿಯಸ್ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಂತ ವ್ಯಾಲೆಂಟೈನ್ ಮಾತ್ರ. ಸೈನಿಕ ಮನದಾಳವನ್ನು ಅರಿತ ವ್ಯಾಲೆಂಟೈನ್ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಜತೆ ಒಂದುಗೂಡಿಸುತ್ತಿದ್ದರಂತೆ. ಮದುವೆಯಾಗಲು ಇಚ್ಛಿಸುತ್ತಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದರಂತೆ. ತಮ್ಮ ಜೀವನವನ್ನೇ ಪಣಕ್ಕಿಟ್ಟು ಹಲವು ಪ್ರೇಮಿಗಳ ನೆರವಿಗೆ ನಿಂತಿದ್ದರಂತೆ.