ಜಮ್ಮುಕಾಶ್ಮೀರ: ಕೋವಿಡ್ ನಿಂದಾಗಿ ಬಾಗಿಲು ಮುಚ್ಚಿದ್ದ ದೇಗುಲಗಳು, ಸರ್ಕಾರದ ಮಾರ್ಗಸೂಚಿ ಅನುಸಾರ ಓಪನ್ ಆಗಿವೆ. ಇದರಿಂದಾಗಿ ದೇಗುಲದ ಬಳಿ ವ್ಯಾಪಾರ ಮಾಡುತ್ತಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಈ ಹಿಂದೆ ನಡೆಯುತ್ತಿದ್ದಷ್ಟು, ವ್ಯಾಪಾರ ಈಗ ನಡೆಯುತ್ತಿಲ್ಲ ಅನ್ನೋದು ವ್ಯಾಪಾರಸ್ಥರಲ್ಲಿ ಬೇಸರ ತರಿಸಿದೆ.
ಜಮ್ಮುಕಾಶ್ಮೀರದ ಕತ್ರಾದಲ್ಲಿ ಮಾತಾ ವೈಷ್ಣೋದೇವಿ ದೇಗುಲ ತೆರೆದಿದ್ದು, ಭಕ್ತರ ಸಂಖ್ಯೆ ವಿರಳವಾಗಿದೆ. ಇದರಿಂದಾಗಿ, ಹೋಟೆಲ್, ಆಟೋ, ಟ್ಯಾಕ್ಸಿ, ಸ್ಥಳೀಯ ವ್ಯಾಪಾರಸ್ಥರಿಗೆ ದೊಡ್ಡ ಹೊಡೆತ ಬಿದ್ದಿದೆ. ದೇವಸ್ಥಾನ ಓಪನ್ ಮಾಡಲು ಸರ್ಕಾರ ಅನುಮತಿ ನೀಡಿದೆ, ಇನ್ನು ಮುಂದಾದರೂ ಜೀವನ ಸುಧಾರಿಸುತ್ತದೆ ಅಂದುಕೊಂಡಿದ್ದವರಿಗೆ ಈ ಬೆಳವಣಿಗೆ ಮತ್ತಷ್ಟು ಆಘಾತಕಾರಿಯನ್ನುಂಟು ಮಾಡಿದೆ.
ವೈಷ್ಣೋದೇವಿ ಯಾತ್ರೆ.. ದುಡಿಮೆಯಿಲ್ಲದೆ ವ್ಯಾಪಾರಸ್ಥರು ಕಂಗಾಲು ಪ್ರತಿ ವರ್ಷ ವೈಷ್ಣೊದೇವಿ ದೇಗುಲಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದರು. ಕೋವಿಡ್ ನಿಂದಾಗಿ ಮಾರ್ಚ್ 18 ರಂದು ದೇಗುಲದ ಬಾಗಿಲು ಮುಚ್ಚಲಾಯಿತು. ಸತತ ಐದು ತಿಂಗಳ ಬಳಿಕ ಅಂದರೆ ಆಗಸ್ಟ್ 16 ರಂದು ಯಾತ್ರೆಯನ್ನು ಪುನಾರಂಭಿಸಲಾಯಿತು. ಮೊದಲಿಗೆ ದಿನಕ್ಕೆ 2 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಯ್ತು. ನಂತರ ಐದು ಸಾವಿರ, ಆಮೇಲೆ 7 ಸಾವಿರಕ್ಕೆ ಹೆಚ್ಚಿಸಲಾಯ್ತು. ನವೆಂಬರ್ 1 ರಿಂದ 15 ಸಾವಿರ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಯ್ತು.
ಯಾತ್ರೆಯ ಮೂಲ ಶಿಬಿರವಾದ ಕತ್ರಾದಲ್ಲಿ ಕೆಲವು ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದ್ದರೂ, ಹೇಳಿಕೊಳ್ಳುವಂತಹ ವ್ಯಾಪಾರ ನಡೆಯುತ್ತಿಲ್ಲ. ಈ ಹಿಂದೆ ದಿನಕ್ಕೆ 10 ರಿಂದ 15 ಸಾವಿರ ರೂಪಾಯಿ ಗಳಿಸುತ್ತಿದ್ದವು. ಈಗ 200 ರಿಂದ 300 ರೂಪಾಯಿ ಗಳಿಕೆಯಾಗುವುದೇ ಕಷ್ಟ ಅನ್ನೋದು ವ್ಯಾಪಾರಸ್ಥರ ಮಾತು.