ವಡೋದರಾ(ಗುಜರಾತ್):ವಡೋದರದ ಹರಾನಿ ಪ್ರದೇಶದಲ್ಲಿ ವಾಸಿಸುತ್ತಿದ್ದ 24 ವರ್ಷದ ಅವಳಿ ಸಹೋದರಿಯರು ಕಳೆದ 51 ದಿನಗಳಿಂದ ನಾಪತ್ತೆಯಾಗಿದ್ದಾರೆ. ಸಾರಿಕಾ ಹಾಗೂ ಶೀತಲ ನಾಪತ್ತೆಯಾದವರು. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಹುಡುಕಿಕೊಡುವಂತೆ ಇವರ ತಂದೆ ಚಿಮನ್‌ಭಾಯ್ ವಾಂಕರ್ ಎಂಬುವವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಸಮಾಧಾನಕರ ಉತ್ತರ ಸಿಗದ ಕಾರಣ ಮುಖ್ಯಮಂತ್ರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಹೆಣ್ಣು ಮಕ್ಕಳನ್ನು ಪತ್ತೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಗೃಹ ಸಚಿವರಿಗೆ ಅವರು ಮನವಿ ಮಾಡಿದ್ದಾರೆ.
ನಗರದ ಹರಾನಿ ಪ್ರದೇಶದ ಮೋಟ್‌ನಾಥ್ ರೆಸಿಡೆನ್ಸಿಯಲ್ಲಿ ವಾಸಿಸುತ್ತಿದ್ದ ನೇಕಾರ ಕುಟುಂಬದ ಇಬ್ಬರು ಅವಳಿ ಸಹೋದರಿಯರು ದಿಢೀರ್ ನಾಪತ್ತೆಯಾಗಿದ್ದು, ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಇಬ್ಬರ ಪೈಕಿ ಒಬ್ಬ ಸಹೋದರಿ ಎಂಎಸ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದರೆ, ಮತ್ತೊಬ್ಬ ಸಹೋದರಿ ಎಸಿಡಿಟಿ ಕಾಲೇಜಿನಲ್ಲಿ ಓದುತ್ತಿದ್ದಳು. ಕಳೆದ ಫೆ.17 ರಂದು ಇಬ್ಬರೂ ಸಹೋದರಿಯರು ಕಾಲೇಜು ವ್ಯಾಸಂಗಕ್ಕೆ ಹೋಗಿದ್ದು, ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಭಾರಿ ಹುಡುಕಾಟ ನಡೆಸಿದ್ದಾರೆ. ಇವರ ಬಗ್ಗೆ ಸುಳಿವು ಸಿಗದ ಕಾರಣ ಹರಾನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಸಿಸಿಟಿವಿ ದೃಶ್ಯ ಪರಿಶೀಲನೆ: ಆದರೆ ಸಯಾಜಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಮನೆಯವರಿಗೆ ತಿಳಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಕಾಣೆಯಾಗಿರುವ ಬಗ್ಗೆ ಸಯಾಜಿಗಂಜ್ ಪೊಲೀಸ್ ಠಾಣೆಯಲ್ಲಿ ಫೆ.17 ರಂದು ದೂರು ದಾಖಲಿಸಿದ್ದಾರೆ. ನಾಪತ್ತೆ ದೂರು ಸ್ವೀಕರಿಸಿದ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಎಂಎಸ್ ವಿಶ್ವವಿದ್ಯಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಸಹೋದರಿಯರಿಬ್ಬರೂ ಕಾಲೇಜು ಬಿಟ್ಟು ಹೋಗುತ್ತಿರುವುದು ಕಂಡು ಬಂದಿದೆ. ಆದರೆ ನಂತರ ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ.