ವಡೋದರಾ(ಗುಜರಾತ್):ಇತ್ತೀಚಿನ ದಿನಗಳಲ್ಲಿ ವೈವಾಹಿಕ ಬಂಧನಕ್ಕೊಳಗಾಗದೇ ಒಂಟಿಯಾಗಿ ಜೀವನ ನಡೆಸುವ ಟ್ರೆಂಡ್ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಸೆಲ್ಫ್ ಮ್ಯಾರೇಜ್ ಪ್ರಕರಣ ಹೆಚ್ಚಾಗುತ್ತಿದ್ದು, ವಿದೇಶದಲ್ಲಿ ಇಂತಹ ಪ್ರಕರಣ ಈಗಾಗಲೇ ಕಂಡು ಬಂದಿವೆ. ಆದರೆ, ಮೊಟ್ಟಮೊದಲ ಸಲ ಭಾರತದಲ್ಲೊಂದು ಸೆಲ್ಫ್ ಮ್ಯಾರೇಜ್ ಪ್ರಕರಣ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ.
24 ವರ್ಷದ ಯುವತಿಯೊಬ್ಬಳು ಜೂನ್ 11ರಂದು ಸ್ವಯಂ ಮದುವೆ ಮಾಡಿಕೊಳ್ಳಲಿದ್ದು, ಇದಾದ ಬಳಿಕ ಎರಡು ವಾರಗಳ ಕಾಲ ಹನಿಮೂನ್ ಮಾಡಿಕೊಳ್ಳಲಿದ್ದಾಳಂತೆ. ಇದಕ್ಕೋಸ್ಕರ ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಇಂತಹ ಪ್ರಕರಣ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು ಎಂದು ವರದಿಯಾಗಿದೆ.
ಜೂನ್ 11ರಂದು ವಡೋದರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಯುವತಿ ತನ್ನೊಂದಿಗೆ ಮದುವೆ ಮಾಡಿಕೊಳ್ಳಲಿದ್ದಾಳೆ. ವಿಶೇಷವೆಂದರೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ಸಹ ನಡೆಯಲಿದೆ. ಈ ವೇಳೆ ಯುವತಿ ತನ್ನಷ್ಟಕ್ಕೆ ತಾನೇ ಮಾಂಗಲ್ಯ ಕಟ್ಟಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಎರಡು ವಾರಗಳ ಕಾಲ ಹನಿಮೂನ್ಗೆ ತೆರಳಲಿದ್ದಾರೆ.