ನವದೆಹಲಿ: ರಾಷ್ಟ್ರ ರಾಜಧಾನಿ ಎಲ್ಲ ಜನರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
69,000 ಕೋಟಿ ರೂ.ಗಳ ಬಜೆಟ್ ಮಂಡಿಸಿದ ದೆಹಲಿ ಡಿಸಿಎಂ ಹಾಗೂ ವಿತ್ತ ಸಚಿವ ಮನೀಶ್ ಸಿಸೋಡಿಯಾ, ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ. ಅನುದಾನ ನೀಡಿರುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಸೋಡಿಯಾ, ಉಚಿತ ಲಸಿಕೆಗಾಗಿ ನಾವು ಬಜೆಟ್ನಲ್ಲಿ 'ಆಮ್ ಆದ್ಮಿ ನಿಶುಲ್ಕ್ ಕೋವಿಡ್ ಲಸಿಕೆ ಯೋಜನೆ' ಅಡಿಯಲ್ಲಿ 50 ಕೋಟಿ ರೂ. ಮೀಸಲಿಟ್ಟಿದ್ದೇವೆ. ದಿನದ ವ್ಯಾಕ್ಸಿನೇಷನ್ ಪ್ರಮಾಣವನ್ನು 45,000 ದಿಂದ 60,000ಕ್ಕೆ ಹೆಚ್ಚಿಸಲಾಗುವುದು. ಮುಂದಿನ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕೊರೊನಾಬ್ಬರ: ಮುಂಬೈನಲ್ಲಿ ಭಾಗಶಃ ಲಾಕ್ಡೌನ್ ಹೇರಲಿದೆಯಂತೆ ಮಹಾ ಸರ್ಕಾರ
ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ 250 ರೂ. ಕೊಟ್ಟು ಲಸಿಕೆ ಹಾಕಿಸಿಕೊಳ್ಳಬೇಕು. ಅದೆಷ್ಟೋ ಬಡ ಜನರು ಈ ಹಣದಲ್ಲಿ ಪಡಿತರ ಪಡೆಯಬೇಕೇ? ಅಥವಾ ಲಸಿಕೆ ಹಾಕಿಸಿಕೊಳ್ಳಬೇಕೆ ಎಂದು ಯೋಚಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳು ಸಂದುತ್ತಿರುವ ಈ ವೇಳೆ ನಾಗರಿಕರ ಮನಸ್ಸಿನಲ್ಲಿ ಈ ಪ್ರಶ್ನೆ ಉದ್ಭವಿಸಬಾರದು. ಹೀಗಾಗಿ ಉಚಿತ ವ್ಯಾಕ್ಸಿನೇಷನ್ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ.