ನವದೆಹಲಿ :ಸುರಕ್ಷತೆಯ ವಿಚಾರದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ ಎಂದಾದ್ರೂ ಅಂತಹ ಕೋವಿಡ್ ಲಸಿಕೆಗಳನ್ನು ನಾವು ಅನುಮೋದಿಸುವುದಿಲ್ಲ. ಲಸಿಕೆಗಳು ಶೇ.100ರಷ್ಟು ಸುರಕ್ಷಿತವಾಗಿವೆ ಎಂದು ಡಿಸಿಜಿಐ ಅಧ್ಯಕ್ಷ ವಿ ಜಿ ಸೋಮಾನಿ ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಲಸಿಕೆ ಬಗ್ಗೆ ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ), ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿರುವುದಾಗಿ ಘೋಷಿಸಿತು.
ಡಿಸಿಜಿಐ ಅಧ್ಯಕ್ಷ ವಿ.ಜಿ.ಸೋಮಾನಿ ಪ್ರತಿಕ್ರಿಯೆ ಇದನ್ನೂ ಓದಿ: ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 'ಕೊವ್ಯಾಕ್ಸಿನ್' ಹಾಗೂ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್' ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡುವಂತೆ ತಿಳಿಸಿ ತಜ್ಞರ ಸಮಿತಿಯು ಡಿಸಿಜಿಐಗೆ ಶಿಫಾರಸು ಮಾಡಿತ್ತು.
ಈ ಎರಡು ಲಸಿಕೆಗಳ ತುರ್ತು ಬಳಕೆಗೆ ಸಮ್ಮತಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೋಮಾನಿ, ಈ ಲಸಿಕೆಗಳು ಶೇ.100ರಷ್ಟು ಸುರಕ್ಷಿತವಾಗಿವೆ. ಸುರಕ್ಷತೆಯ ವಿಚಾರದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ ಎಂದಾದ್ರೂ ಅಂತಹ ಲಸಿಕೆಗಳನ್ನು ನಾವು ಅನುಮೋದಿಸುವುದಿಲ್ಲ.
ಸಣ್ಣ ಜ್ವರ, ನೋವು ಹಾಗೂ ಅಲರ್ಜಿಯಂತಹ ಕೆಲ ಅಡ್ಡಪರಿಣಾಮಗಳು ಸಾಮಾನ್ಯವಾಗಿ ಎಲ್ಲಾ ಲಸಿಕೆ ಪಡೆಯುವುದರಿಂದಲೂ ಬರುತ್ತವೆ ಎಂದು ಹೇಳಿದರು.