ನವದೆಹಲಿ:ಖಾಸಗಿ ಆಸ್ಪತ್ರೆಗಳು ಕೋವಿನ್ ಆ್ಯಪ್ ಮೂಲಕ ಕೋವಿಡ್ ಲಸಿಕೆ ಬೇಡಿಕೆಗಳನ್ನು ದಾಖಲಿಸಬೇಕು. ಅದರಲ್ಲಿಯೇ ಲಸಿಕೆ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಉತ್ಪಾದಕರಿಂದ ನೇರವಾಗಿ ಡೋಸೇಜ್‌ಗಳನ್ನು ಖರೀದಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸೀಮಿತ ಲಸಿಕೆ ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ವ್ಯರ್ಥವಾಗುವುದನ್ನು ತಡೆಯಲು ಖಾಸಗಿ ಆಸ್ಪತ್ರೆಗಳಿಗೆ ಒಂದು ತಿಂಗಳವರೆಗೆ ಬೇಕಾಗುವ ಡೋಸೇಜ್‌ಗಳ ಮೇಲೆ ಸರ್ಕಾರವು ಗರಿಷ್ಠ ಮಿತಿಯನ್ನು ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳು ಜುಲೈ 1 ರಿಂದ (ನಾಳೆಯಿಂದ) ಜಾರಿಗೆ ಬರುತ್ತವೆ. ಹಿಂದಿನ ತಿಂಗಳ ಯಾವುದೇ ಏಳು ದಿನಗಳ ಅವಧಿಯಲ್ಲಿ (ಆಸ್ಪತ್ರೆಯು ಏಳು ದಿನಗಳ ಅವಧಿಯನ್ನು ಆಯ್ಕೆ ಮಾಡಬಹುದು) ಖಾಸಗಿ ಆಸ್ಪತ್ರೆಗಳ ಲೆಕ್ಕಾಚಾರಕ್ಕೆ 'ಗರಿಷ್ಠ ಮಾಸಿಕ ಮಿತಿ' ವಿಧಿಸಲಾಗುತ್ತದೆ.
ಉದಾಹರಣೆಗೆ, ಖಾಸಗಿ ಆಸ್ಪತ್ರೆಯು ಜುಲೈಗೆ ಲಸಿಕೆ ಬೇಡಿಕೆ ಇಟ್ಟರೆ ಅದು ಜೂನ್ 10-16 ಅನ್ನು ಏಳು ದಿನಗಳ ಅವಧಿಯಾಗಿ ಆಯ್ಕೆ ಮಾಡಬಹುದು. ಆ ಅವಧಿಯಲ್ಲಿ, 700 ಡೋಸ್‌ಗಳನ್ನು ಬಳಸಿದರೆ, ದೈನಂದಿನ ಸರಾಸರಿ 100 ಆಗಿರುತ್ತದೆ. ಆದ್ದರಿಂದ, "ಗರಿಷ್ಠ ಮಾಸಿಕ ಮಿತಿ", 100 ಡೋಸ್‌ಗಳು x 31 ದಿನಗಳು (ಜುಲೈಗೆ) x 2 (ಸರಾಸರಿಗಿಂತ ದ್ವಿಗುಣ), ಇದು 6,200 ಡೋಸ್ ಆಗುತ್ತದೆ.