ನವದೆಹಲಿ:ಭಾರತ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದಕ್ಷಿಣ ಆಫ್ರಿಕಾದ ಗಾಂಬಿಯಾದಲ್ಲಿ ಮಕ್ಕಳು ಸಾವನ್ನಪ್ಪಿದ ಆರೋಪದ ಬಳಿಕ, ಉಜ್ಬೇಕಿಸ್ತಾನದಲ್ಲೂ ಇಂಥಹದ್ದೇ ಗಂಭೀರ ಆರೋಪ ಹೊರಿಸಲಾಗಿದೆ. ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನದಲ್ಲಿ ಭಾರತದಿಂದ ರಫ್ತು ಮಾಡಿಕೊಂಡ ಔಷಧ ಸೇವಿಸಿ 18 ಮಕ್ಕಳು ಅಸುನೀಗಿದ್ದಾರೆ ಎಂದು ಹೇಳಲಾಗ್ತಿದೆ. ಇದರ ವಿರುದ್ಧ ಅಲ್ಲಿನ ಸರ್ಕಾರ ತನಿಖೆಗೆ ಸೂಚಿಸಿದೆ.
ಭಾರತೀಯ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ. ಇದರಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಮೃತ ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮೊದಲು ಈ ಔಷಧಿಯನ್ನು 2 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಬಾರಿ, 2.5- 5 ಎಂಎಲ್ ತೆಗೆದುಕೊಂಡಿದ್ದಾರೆ ಎಂದು ಅದು ಹೇಳಿದೆ.