ತೆಹ್ರಿ (ಉತ್ತರಾಖಂಡ) : ಮುಖ್ಯಮಂತ್ರಿಯೊಬ್ಬರು ರಾಜಕೀಯ ಭಾಷಣ ಅಥವಾ ಅಧಿಕಾರಿಗಳೊಂದಿಗೆ ಸಭೆ ನಡೆಸುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾನುವಾರ ತೆಹ್ರಿ ಗಡ್ವಾಲ್ ಜಿಲ್ಲೆಯ ತಿವಾರ್ ಗ್ರಾಮದಲ್ಲಿ ಹೊಲ ಉಳುಮೆ ಮಾಡುತ್ತಿರುವುದು ಕಂಡುಬಂದಿದೆ.
ಟ್ರಾಕ್ಸೂಟ್ ಧರಿಸಿ ಹೊಲ ಉಳುಮೆ.. ಮುಖ್ಯಮಂತ್ರಿಗಳು ಕೆಂಪು ಮತ್ತು ಕಪ್ಪು ಟ್ರಾಕ್ಸೂಟ್ ಧರಿಸಿ ಪವರ್ ವೀಡರ್ನಿಂದ ಹೊಲ ಉಳುಮೆ ಮಾಡಿದರು. ಹೊಲದಿಂದ ಹೊರಬಂದ ನಂತರ ಗ್ರಾಮಸ್ಥರನ್ನು ಭೇಟಿ ಮಾಡಿ ಅಭಿವೃದ್ಧಿ ಯೋಜನೆಯ ಬಗ್ಗೆ ವಿಚಾರಿಸಿದರು. ಉತ್ತರಾಖಂಡದ ಮುಖ್ಯಮಂತ್ರಿಗಳು ಶನಿವಾರದಂದು ಬೌರಾಡಿಯ ಪ್ರತಾಪ್ ಇಂಟರ್ ಕಾಲೇಜಿನಲ್ಲಿ ಸುಮಾರು 533 ಕೋಟಿ ರೂ.ಗಳ ವೆಚ್ಚದಲ್ಲಿ 138 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಅಧಿಕಾರಿಗಳ ಪ್ರಕಾರ ಸುಮಾರು 138 ಯೋಜನೆಗಳ ಪೈಕಿ 158 ಕೋಟಿ ರೂ. ವೇಚ್ಚದಲ್ಲಿ 45 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 375 ಕೋಟಿ ರೂ.ಗಳ ವೆಚ್ಚದಲ್ಲಿ 93 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ, ಪುಷ್ಕರ್ ಸಿಂಗ್ ಧಾಮಿ ಅವರು ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ 1120 ಫಲಾನುಭವಿಗಳಿಗೆ ಮೊದಲ ಕಂತಾಗಿ 6.72 ಕೋಟಿ ರೂ.ಗಳ ಡಮ್ಮಿ ಚೆಕ್ಗಳನ್ನು ವಿತರಿಸಿದರು. ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಈ ಸಭೆಗೂ ಮುನ್ನ ಧಾಮಿ ಅವರು ರಸ್ತೆ ಬದಿಯಲ್ಲಿ ಸ್ಥಳೀಯರೊಂದಿಗೆ ಬಿಸಿ ಚಹಾ ಹೀರುತ್ತಾ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡರು.