ಉತ್ತರಕಾಶಿ(ಉತ್ತರಾಖಂಡ):ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿದು ಅವಶೇಷಗಳಡಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಇಂದು 10ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಸುರಂಗದ ಬೆಟ್ಟದ ಮೇಲಿನಿಂದ ಯಂತ್ರದ ಸಹಾಯದಿಂದ ಲಂಬವಾಗಿ ಮಾರ್ಗ ಕೊರೆಯಲಾಗುತ್ತಿದ್ದು, ರಕ್ಷಣಾ ಕಾರ್ಯ ಚುರುಕುಗೊಂಡಿದೆ.
ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಂತೆ ಅವರ ಕುಟುಂಬದ ಸದಸ್ಯರ ಅಂಗಲಾಚುತ್ತಿದ್ದಾರೆ. ಕಾರ್ಮಿಕರಿಗೆ ಆರೋಗ್ಯ ವೈಫಲ್ಯದ ಭಯದ ಮಧ್ಯೆಯೇ, ಆರು ಇಂಚು ಅಗಲದ ಪೈಪ್‌ಲೈನ್ ಮೂಲಕ ಮೊದಲ ಬಾರಿಗೆ ಬಿಸಿಯಾದ ಖಿಚಡಿಯನ್ನು ಕಳುಹಿಸಿಕೊಡಲಾಯಿತು.
ನವೆಂಬರ್ 12ರಂದು, ಸಿಲ್ಕ್ಯಾರಾದಿಂದ ಬಾರ್ಕೋಟ್‌ಗೆ ಸುರಂಗದ ಸಿಲ್ಕ್ಯಾರಾ ಭಾಗದಲ್ಲಿ 60 ಮೀಟರ್ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕುಸಿದು 41 ಕಾರ್ಮಿಕರು ಸಿಲುಕಿಕೊಂಡರು. ಸರ್ಕಾರದ ಪ್ರಕಾರ, ನಿರ್ಮಾಣ ಹಂತದಲ್ಲಿದ್ದ 4.5 ಕಿಮೀ (2.8 ಮೈಲಿ) ಸುರಂಗದ ಒಂದು ಭಾಗ, ಪ್ರವೇಶದ್ವಾರದಿಂದ ಸುಮಾರು 200 ಮೀಟರ್ (650 ಅಡಿ)ವರೆಗೆ ಕುಸಿದಿದೆ. ಕಾರ್ಮಿಕರು 2 ಕಿಮೀ ಸುರಂಗದ ಒಳ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ.
ಆಗುರ್ ಬೋರಿಂಗ್ ಯಂತ್ರದಿಂದ ರಕ್ಷಣಾ ಕಾರ್ಯ:ಸುರಂಗದ ಭಾಗದಲ್ಲಿ ವಿದ್ಯುತ್ ಮತ್ತು ನೀರು ಲಭ್ಯವಿದೆ. ನಾಲ್ಕು ಇಂಚಿನ ಕಂಪ್ರೆಸರ್ ಪೈಪ್‌ಲೈನ್ ಮೂಲಕ ಆಹಾರ ಪದಾರ್ಥಗಳು ಮತ್ತು ಔಷಧಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನಿಂದ (NHIDCL) ಸಿಲ್ಕ್ಯಾರಾ ತುದಿಯಿಂದ ಆಗುರ್ ಬೋರಿಂಗ್ ಯಂತ್ರದ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಾಳೆಹಣ್ಣು, ಸೇಬು, ಖಿಚಡಿ ಮತ್ತು ದಲಿಯಾ ರವಾನೆ:ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಮಾತನಾಡಿ, ''ತಮ್ಮ ಪ್ರಮುಖ ಸವಾಲು 900 ಎಂಎಂ ಪೈಪ್ ಮೂಲಕ ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸುವುದು. ಆದರೆ, ಆ ಕಾರ್ಯವನ್ನು ಪ್ರಯತ್ನಿಸಲಾಗುವುದು. ಈಗಾಗಲೇ ಆಹಾರ, ಮೊಬೈಲ್‌ಗಳು ಮತ್ತು ಚಾರ್ಜರ್‌ಗಳನ್ನು 6 ಇಂಚಿನ ಲೈಫ್‌ಲೈನ್ ಮೂಲಕ ಸುರಂಗದ ಒಳಗೆ ಕಳುಹಿಸಲಾಗಿದೆ. ಕಾರ್ಮಿಕರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೈದ್ಯರ ಸಹಾಯ ಪಡೆದು ಯಾವ ಆಹಾರವನ್ನು ಸಿದ್ಧಪಡಿಸಿ ಕಳುಹಿಸಲಾಗಿದೆ. ಬಾಳೆಹಣ್ಣು, ಸೇಬು, ಖಿಚಡಿ ಮತ್ತು ದಲಿಯಾವನ್ನು ಅವರಿಗೆ ಕಳುಹಿಸಿಕೊಡಲಾಯಿತು'' ಎಂದು ತಿಳಿಸಿದರು.
ಸಿಕ್ಕಿಬಿದ್ದ ಕೂಲಿ ಕಾರ್ಮಿಕರಿಗಾಗಿ ಖಿಚಡಿ ತಯಾರಿಸಿದ ಹೇಮಂತ್ ಮಾತನಾಡಿ, ''ಇದೇ ಮೊದಲ ಬಾರಿಗೆ ಸುರಂಗದ ಒಳಗಿರುವ ಕಾರ್ಮಿಕರಿಗೆ ಖಿಚಡಿ (ಬಿಸಿಯೂಟ) ಕಳುಹಿಸಲಾಗಿದೆ. ಅಧಿಕಾರಿಗಳು ಶಿಫಾರಸು ಮಾಡಿದ ಆಹಾರವನ್ನು ಮಾತ್ರ ನಾವು ತಯಾರಿಸುತ್ತಿದ್ದೇವೆ" ಎಂದರು.
''ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಅವಧಿಯಲ್ಲಿ ಕಾರ್ಮಿಕರ ಸಂಬಂಧಿಕರು ಸ್ಥಳಕ್ಕೆ ಬಂದರೆ, ಅವರಿಗೆ ವಸತಿ ಮತ್ತು ಆಹಾರ ಒದಗಿಸಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ'' ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ವಾಕಿ-ಟಾಕಿಯಿಂದ ಕಾರ್ಮಿಕರ ಸಂಪರ್ಕಿಸಲು ಪ್ರಯತ್ನ:ಉತ್ತರಕಾಶಿ ಸಿಲ್ಕ್ಯಾರ ಸುರಂಗದಲ್ಲಿ ಲಂಬ ಕೊರೆಯುವ ಯಂತ್ರದೊಂದಿಗೆ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಲ್ಲದೆ, ರಕ್ಷಣಾ ತಂಡವು ವಾಕಿ-ಟಾಕಿಗಳ ಮೂಲಕ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಸಂಪರ್ಕಿಸುವಲ್ಲಿ ನಿರತವಾಗಿದೆ. ಸುರಂಗದಲ್ಲಿ ಶೀಘ್ರದಲ್ಲೇ ಯಶಸ್ಸು ಸಿಗುವ ಭರವಸೆಯನ್ನು ರಕ್ಷಣಾ ತಂಡ ಹೊಂದಿದೆ. ಇತ್ತೀಚೆಗೆ, ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿ ಮಂಗೇಶ್ ಗಿಲ್ಡಿಯಾಲ್ ಕೂಡ ಸಿಲ್ಕ್ಯಾರಾ ಸುರಂಗಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗಳ ಕುರಿತು ಪರಿಶೀಲಸಿದ್ದರು.
ಇದನ್ನೂ ಓದಿ:ಉತ್ತರಕಾಶಿ: ಸುರಂಗದೊಳಗೆ 9 ದಿನಗಳಿಂದ 41 ಕಾರ್ಮಿಕರ ಜೀವನ್ಮರಣದ ಹೋರಾಟ; ಭರದಿಂದ ಸಾಗಿದ ಪರ್ಯಾಯ ರಕ್ಷಣಾ ಕಾರ್ಯ